






ಕೊಕ್ಕಡ, ಫೆ.23: 2024-25ನೇ ಸಾಲಿನ ಫಸಲು ಭೀಮಾ ಯೋಜನೆಯಡಿ ಬಾಕಿ ಉಳಿದಿರುವ ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೊಕ್ಕಡ ಗ್ರಾಮದ ಕೃಷಿಕರು ಬೆಂಗಳೂರು ಕೇಂದ್ರದ ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.



ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯ ಮೂಲಕ ಮನವಿ ಸಲ್ಲಿಸಲಾಯಿತು. ಗ್ರಾಮದ ಕೃಷಿಕರು ಪ್ರಾಥಮಿಕ ಸೇವಾ ಸಹಕಾರಿ ಸಂಘದ ಮೂಲಕ ಟಾಟಾ ಎಐಜಿ ಸಂಸ್ಥೆಯಲ್ಲಿ ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದರು. 2025ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಬರಬೇಕಾಗಿದ್ದ ವಿಮಾ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ ಎಂದು ರೈತರು ತಿಳಿಸಿದ್ದಾರೆ.
ವಿಮೆ ಪರಿಹಾರವನ್ನು ನಂಬಿಕೊಂಡು ಸಾಲ ಮರುಪಾವತಿ ನಿರೀಕ್ಷಿಸಿದ್ದ ರೈತರು ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸರ್ಕಾರದಿಂದ ಹಣ ತಡೆಹಿಡಿಯಲಾಗಿದೆ ಎಂಬ ಉತ್ತರ ಲಭಿಸುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಒಂದು ವಾರದೊಳಗೆ ಎಲ್ಲಾ ಅರ್ಹ ಕೃಷಿಕರಿಗೆ ವಿಮಾ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿರುವ ರೈತರು, ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮಾರ್ಚ್ 8ರಂದು ಧರ್ಮಸ್ಥಳ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.









