ಮೊಗ್ರು: ಹುಲಿ ಗಣತಿ ಸಮೀಕ್ಷೆ ವೇಳೆ ನೌಕರನ ಮೇಲೆ ಕಾಡು ಹಂದಿ ದಾಳಿ

0

ಬೆಳ್ತಂಗಡಿ: ಅಖಿಲ ಭಾರತ ಹುಲಿ ಗಣತಿ-೨೦೨೬ರ ಎರಡನೇ ಹಂತದ ಸಮೀಕ್ಷೆ ನಡೆಸುತ್ತಿದ್ದ ವೇಳೆ ಬೆಳ್ತಂಗಡಿ ತಾಲೂಕಿನ ಮೊಗ್ರು ಅರಣ್ಯ ಪ್ರದೇಶದಲ್ಲಿ ದಿನಗೂಲಿ ನೌಕರ ಶೇಷಪ್ಪ ಎಂಬವರ ಮೇಲೆ ಕಾಡು ಹಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.

ನಾಲ್ಕು ದಿನಗಳ ಸಮೀಕ್ಷೆ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ಮೊದಲ ಹಂತದ ಹುಲಿ ಗಣತಿ ನಡೆದಿದೆ. ಫೆ.೧೬ರಂದು ಎರಡನೇ ಹಂತದ ಸಮೀಕ್ಷೆ ಆರಂಭಗೊಂಡಿದ್ದು ನಾಲ್ಕು ದಿನ ನಡೆಯಲಿದೆ. ಪ್ರತಿ ಅರಣ್ಯ ಬೀಟ್‌ನಲ್ಲಿ ಬೆಳಗ್ಗೆ ಹಾಗೂ ಸಂಜೆ ಒಟ್ಟು ನಾಲ್ಕು ಕಿ.ಮೀ. ಉದ್ದದ ಮಾರ್ಗದಲ್ಲಿ ಸಮೀಕ್ಷೆ ನಡೆಯುತ್ತಿದೆ. ಈ ಹಂತದಲ್ಲಿ ಜಿಂಕೆ, ಸಾಂಬಾರ್, ಕಾಟಿ, ಕಾಡುಹಂದಿ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ನೇರ ವೀಕ್ಷಣೆ, ಪಾದಚಿಹ್ನೆಗಳು, ವಾಸಸ್ಥಳದ ಸ್ಥಿತಿಗತಿಗಳನ್ನು ದಾಖಲಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಕಾಡು ಹಂದಿ ದಾಳಿ-ಗಾಯ; ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಮೊಗ್ರು ಅರಣ್ಯ ಬೀಟ್‌ನಲ್ಲಿ ಬೆಳಗಿನ ವೇಳೆ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಡು ಹಂದಿ ದಾಳಿ ನಡೆಸಿ ಅರಣ್ಯ ಇಲಾಖೆಯ ದಿನಕೂಲಿ ನೌಕರ ಶೇಷಪ್ಪ ಎಂಬವರು ಗಾಯಗೊಂಡಿದ್ದಾರೆ. ಮೊಗ್ರು ಬ್ಲಾಕ್ ಕಲ್ಲಮಾಡು ಆಲಮಟ್ಟಿ ಪ್ಲಾಂಟೇಶನ್‌ನ ಬಳಿ ಗಸ್ತು ಅರಣ್ಯ ಪಾಲಕಿ ಜೊತೆ ಸಮೀಕ್ಷೆಗೆ ತೆರಳುತ್ತಿದ್ದ ವೇಳೆ ಕಾಡು ಹೊಂದಿ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ವರದಿಯಾಗಿದೆ. ಸಮೀಕ್ಷೆಯ ವೇಳೆ ಅಗತ್ಯ ರಕ್ಷಣಾ ಸಾಧನ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಕೊರತೆಯಿಂದಾಗಿ ಸಿಬ್ಬಂದಿಗಳು ಜೀವ ಭಯದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಥಮ ಹಂತದ ಸಮೀಕ್ಷೆ; ಜ.೫ರಿಂದ ಮೂರು ದಿನ ಪ್ರಥಮ ಹಂತ ಸಮೀಕ್ಷೆ ನಡೆದಿತ್ತು.

ಸಿಬ್ಬಂದಿ ಕೊರತೆ, ಜೀವ ರಕ್ಷಕ ಸಾಧನಗಳ ಕೊರತೆ, ದಟ್ಟ ಅರಣ್ಯದ ಅಪಾಯ, ಸಂವಹನ ಸಾಧನಗಳ ಅಭಾವ ಇವೆಲ್ಲದ್ದರ ನಡುವೆ ಪ್ರಥಮ ಹಂತದಲ್ಲಿ ಸಮೀಕ್ಷೆ ನಡೆದಿತ್ತು. ೧೮ ತಂಡಗಳನ್ನು ರಚಿಸಿ ಪ್ರತಿಯೊಂದು ತಂಡಕ್ಕೆ ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಬೆಳಿಗ್ಗೆ ೬ರಿಂದ ಮಧ್ಯಾಹ್ನವರೆಗೂ ೫ ಕಿ.ಮೀ.ಗೂ ಹೆಚ್ಚಿನ ದೂರ ಕಾಲ್ನಡಿಗೆಯಲ್ಲಿ ಸಂಚರಿಸಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈ ಹಂತದಲ್ಲಿ ಹುಲಿ, ಚಿರತೆ, ಕಾಡು ನಾಯಿ, ನರಿ, ತೋಳ, ಆನೆ ಮತ್ತಿತರ ಕಾಡುಪ್ರಾಣಿಗಳ ಹೆಜ್ಜೆ ಗುರುತುಗಳು, ಲದ್ದಿ, ಸ್ಕ್ರಾಚ್ ಮಾರ್ಕ್‌ಗಳು ದಾಖಲಿಸಲ್ಪಟ್ಟಿದ್ದವು. ಇದೀಗ ೨ನೇ ಹಂತದ ಸಮೀಕ್ಷೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here