ಬುರುಡೆ ಪ್ರಕರಣ: ಧರ್ಮಸ್ಥಳದ ಪರ ಸಿ.ವಿ. ನಾಗೇಶ್ ವಾದ: ಎಪಿಪಿ ದಿವ್ಯರಾಜ್ ಹೆಗ್ಡೆ ಆಕ್ಷೇಪತಿ ಮರೋಡಿ ಪರ ವಕೀಲ ವಿಜಯ ವಾಸುಪೂಜಾರಿಗೆ ದೊರೆಯದ ಕಾಲಾವಕಾಶ-ಫೆ.೧೩ಕ್ಕೆ ಮುಂದೂಡಿಕೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಕ್ಷೇತ್ರದ ಪರವಾಗಿ ಹಿರಿಯ ನ್ಯಾಯವಾದಿ ಸಿ.ವಿ. ನಾಗೇಶ್ ತಂಡ ಸಲ್ಲಿರುವ ಅರ್ಜಿ ವಿಚಾರಣೆ ಫೆ.೫ರಂದು ನಡೆದಿದೆ. ಇದೇ ವೇಳೆ ಧರ್ಮಸ್ಥಳ ಕ್ಷೇತ್ರದ ಪರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಪರ ಹಿರಿಯ ನ್ಯಾಯವಾದಿ ದೊರೆರಾಜು ನೇತೃತ್ವದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ವಕೀಲ ವಿಜಯ ವಾಸು ಪೂಜಾರಿ ಅವರು ವಾದ ಮಂಡನೆಗೆ ಮುಂದಾದರಾದರೂ ಸಮಯದ ಅಭಾವ ಇದ್ದ ಹಿನ್ನೆಲೆಯಲ್ಲಿ ಅವಕಾಶ ದೊರೆತಿಲ್ಲ. ಈ ಮಧ್ಯೆ ಎಸ್‌ಐಟಿ ಪರ ವಕೀಲರಾಗಿರುವ ಬೆಳ್ತಂಗಡಿ ನ್ಯಾಯಾಲಯದ ಸರಕಾರಿ ವಕೀಲ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳದವರನ್ನು ಹೆಚ್ಚುವರಿ ದೂರುದಾರರನಾಗಿ ಮಾಡಬೇಕು ಎಂಬ ಬೇಡಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದರು.

ಈ ರೀತಿಯಾಗಿ ಮತ್ತೋರ್ವರನ್ನು ಫಿರ್ಯಾದಿದಾರರನ್ನಾಗಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ವಾದ ಮಂಡಿಸಿದ ದಿವ್ಯರಾಜ್ ಹೆಗ್ಡೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದವರು ಸಂತ್ರಸ್ತರು ಹೌದೋ ಅಲ್ಲವೋ ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಫೆ.೧೩ಕ್ಕೆ ಮುಂದೂಡಿದರು.
ಘಟನೆಯ ವಿವರ: ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬ ಅಂಶಗಳು ಎಸ್‌ಐಟಿ ತನಿಖೆಯ ವರದಿಯಲ್ಲಿ ದಾಖಲಾಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತರು ಎಂದು ಪರಿಗಣಿಸುವಂತೆ ಆಗ್ರಹಿಸಿ ಕ್ಷೇತ್ರದ ಪರ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿ ಫೆ.೫ರಂದು ಹೈಕೋರ್ಟ್ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ತಮ್ಮ ಸುದೀರ್ಘ ವಾದ ಮಂಡಿಸಿದರು.
ಧರ್ಮಸ್ಥಳವನ್ನು ಸಂತ್ರಸ್ತರು ಎಂದು ಯಾವ ಕಾರಣಕ್ಕೆ ಪರಿಗಣಿಸಬೇಕು ಎಂದು ಅವರು ನ್ಯಾಯಾಲಯದ ಮುಂದೆ ಎಳೆಎಳೆಯಾಗಿ ವಿವರಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಫೆ.೧೩ಕ್ಕೆ ಮುಂದೂಡಿದರು.

ದೊಡ್ಡ ಅನುಮಾನ ಇದೆ-ವಿಜಯ ವಾಸು ಪೂಜಾರಿ: ಬುರುಡೆ ಪ್ರಕರಣದಲ್ಲಿ ತಮ್ಮನ್ನು ಸಂತ್ರಸ್ತರು ಎಂದು ಪರಿಗಣಿಸುವಂತೆ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸಲ್ಲಿಕೆಯಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಪರ ವಾದ ಮಂಡಿಸುತ್ತಿರುವ ವಿಜಯ ವಾಸು ಪೂಜಾರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಧರ್ಮಸ್ಥಳದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದಾರೆ. ಚಿನ್ನಯ್ಯ ಕೋರ್ಟ್‌ಗೆ ಹಾಜರಾಗಿದ್ದಾನೆ. ಧರ್ಮಸ್ಥಳ ಪರ ವಕೀಲರ ಅರ್ಜಿಗೆ ಆತನ ಪರ ವಕೀಲರು ಆಕ್ಷೇಪಣೆ ಸಲ್ಲಿಸಿಲ್ಲ. ಇದರಲ್ಲಿ ದೊಡ್ಡ ಅನುಮಾನ ಇದೆ. ಅದಕ್ಕೆ ಅವರು ನಿಜವಾಗಿಯೂ ಆಕ್ಷೇಪಣೆ ವ್ಯಕ್ತಪಡಿಸಬೇಕಿತ್ತು. ದ.ಕ. ಜಿಲ್ಲೆಯ ಸೆಷನ್ ಕೋರ್ಟ್‌ನಲ್ಲಿ ಆದಂತಹ ಅವರ ಬೇಲ್ ಅಪ್ಲಿಕೇಶನ್‌ನಲ್ಲಿ ಆ ಬುರುಡೆಗಳು ಸಿಕ್ಕಿರುವ ಬಗ್ಗೆ, ನಂತರದ ಬೆಳವಣಿಗೆಗಳ ಬಗ್ಗೆ ಅವನು ಹೇಳಿರುವುದರಿಂದ ನ್ಯಾಯಾಧೀಶರೂ ಸಹ ಬೇಲ್ ಅಪ್ಲಿಕೇಶನ್‌ನಲ್ಲಿ ಎಲ್ಲವನ್ನು ನ್ಯಾಯಯುತವಾಗಿ ಪರಿಗಣಿಸಿರುವುದರಿಂದ ಇಲ್ಲಿ ಬಂದು ಅದಕ್ಕೆ ವ್ಯತಿರಿಕ್ತವಾಗಿ ಧರ್ಮಸ್ಥಳವನ್ನು ಪಾರ್ಟಿ ಮಾಡಲು ಆಕ್ಷೇಪಣೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಹಾಯಕ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ಪರ ವಾದಕ್ಕಾಗಿ ಫೆ. ೧೩ನೇ ತಾರೀಕಿಗೆ ನ್ಯಾಯಾಧೀಶರು ಸಮಯಾವಕಾಶ ನಿಗದಿಪಡಿಸಿದ್ದಾರೆ ಎಂದು ತಿಳಿಸಿದರು.

ವಿಸ್ತೃತವಾದ ವಾದ ನಡೆದಿದೆ-ಮಹೇಶ್ ಕಜೆ: ಶ್ರೀಕ್ಷೇತ್ರ ಧರ್ಮಸ್ಥಳದ ಪರ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖ್ಯಾತ ನ್ಯಾಯವಾದಿ ಸಿ.ವಿ.ನಾಗೇಶ್ ಅವರು ವಾದ ಮಂಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಮಹೇಶ್ ಕಜೆ ಅವರು ವಿಕ್ಟಿಮ್ ಪದದ ಅರ್ಥ ಬಹಳ ವಿಸ್ತಾರವಾಗಿದೆ. ಧರ್ಮಸ್ಥಳ ದೇವಸ್ಥಾನದ ಪರ ಹಾಕಿದ ಅರ್ಜಿಯ ಬಗ್ಗೆ ವಿಸ್ತತವಾದ ವಾದ ನಡೆದಿದೆ. ಒಂದು ಹಂತದಲ್ಲಿ ಈ ಅರ್ಜಿಯ ಪ್ರಕಾರ ವಿಕ್ಟಿಮ್ ಎಂದರೆ ಕೇವಲ ಸಂತ್ರಸ್ತ ಎಂದಷ್ಟೇ ಸೀಮಿತವಾಗುವುದಿಲ್ಲ. ದೂರುದಾರ ಎಂದು ಸೀಮಿತವಾಗಿರುವುದಿಲ್ಲ. ಮಾಹಿತಿದಾರ ಎಂದು ಸೀಮಿತವಾಗುವುದಿಲ್ಲ. ಅದರ ವ್ಯಾಪ್ತಿ ತುಂಬಾ ವಿಸ್ತತವಾಗಿದೆ ಎಂದು ನ್ಯಾಯಾಲಯದ ಸಮ್ಮುಖದಲ್ಲಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದ್ದಾರೆ. ಧರ್ಮಸ್ಥಳ ದೇವಸ್ಥಾನದ ಪರ ಹಾಕಿದ ಅರ್ಜಿಯಲ್ಲಿ ಹಲವಾರು ವ್ಯಾಖ್ಯಾನಗಳನ್ನು ನೀಡಿದ್ದಾರೆ. ಅದರ ಬಗ್ಗೆ ಉಲ್ಲೇಖಿಸಲು ಇಚ್ಛಿಸುವುದಿಲ್ಲ. ನ್ಯಾಯಾಲಯವೇ ತೀರ್ಮಾನ ಮಾಡಬೇಕಿದೆ. ಒಬ್ಬನಿಗೆ ಆರ್ಥಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ತೊಂದರೆಯಾಗಿದ್ದರೆ ಇದೆಲ್ಲವೂ ನಷ್ಟ ಮತ್ತು ಹಾನಿ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ಸ್ಪಷ್ಟವಾಗಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ. ವಿಕ್ಟಿಮ್ ಎಂದರೆ ಏನು, ವಿಕ್ಟಿಮ್‌ಗಳಿಗಿರುವ ಹಕ್ಕು, ವಿಕ್ಟಿಮ್ ಪದದ ವಿಸ್ತಾರದ ಹಿನ್ನೆಲೆಯಲ್ಲಿ ವಾದ ಮಂಡನೆ ಆಗಿದೆ. ಧರ್ಮಸ್ಥಳ ದೇವಸ್ಥಾನಕ್ಕೂ ರೈಟ್ ಆಫ್ ಆಡಿಯೆನ್ಸ್ ಅಂದರೆ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ವಾದ ಮಂಡಿಸಿದ್ದಾರೆ. ಅದರ ಪ್ರಕಾರ ತನಿಖಾ ಆರಂಭದಿಂದ ತನಿಖೆ ಮುಗಿಯುವ ತನಕದ ಹಂತದವರೆಗೆ ಮತ್ತು ಮುಗಿದ ನಂತರದ ಅಪೀಲ್ ಸಂದರ್ಭದಲ್ಲಿಯೂ ಭಾಗವಹಿಸುವ ಅವಕಾಶ ಇದೆ ಎಂಬುದನ್ನು ನ್ಯಾಯಾಲಯದ ಮುಂದೆ ಸ್ಪಷ್ಟ ಪಡಿಸಿದ್ದಾರೆ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ಚಿನ್ನಯ್ಯ ಹಾಜರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾರಂಭದಲ್ಲಿ ಸಾಕ್ಷಿ ದೂರುದಾರವಾಗಿದ್ದ ಮತ್ತು ಬಳಿಕ ಆರೋಪಿಯಾಗಿ ಎಸ್‌ಐಟಿಯಿಂದ ಬಂಧಿಸಲ್ಪಟ್ಟು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಮಂಡ್ಯ ಮೂಲದ ಚಿನ್ನಯ್ಯ ಫೆ.೫ರಂದು ಪತ್ನಿ ಮಲ್ಲಿಕಾ ಜತೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಬಳಿಕ ಈ ಹಿಂದೆಯೂ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ವಿಚಾರಣೆ ಎದುರಿಸಿ ತೆರಳಿದ್ದ ಚಿನ್ನಯ್ಯ ಅವರು ಜಾಮೀನಿನ ಷರತ್ತಿನಂತೆ ಹಲವು ಬಾರಿ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದರು.

LEAVE A REPLY

Please enter your comment!
Please enter your name here