ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣ: ಸಿಬಿಐಗೆ ಹೈಕೋರ್ಟ್ ನೋಟೀಸ್

0

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕು. ಸೌಜನ್ಯಾ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಭರಿತ ತನಿಖೆ ನಡೆಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಸಂಬಂಧಿಸಿ ಹೈಕೋರ್ಟ್ ಸಿಬಿಐ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯ ೨೦೨೩ರ ಜೂನ್ ೧೬ರಂದು ಹೊರಡಿಸಿದ್ದ ತೀರ್ಪಿನಲ್ಲಿನ ನಿರ್ದೇಶನ ಚಾರಿಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನೋಟೀಸ್ ಜಾರಿಗೊಳಿಸಿದೆ. ಕುಸುಮಾವತಿ ಅವರ ಪರ ಹಿರಿಯ ವಕೀಲ ಎಂ.ಆರ್. ಬಾಲಕೃಷ್ಣ ಅವರು ವಾದ ಮಂಡಿಸಿ ಸಿಬಿಐ ಅಡಿ ಖುಲಾಸೆ ಸಮಿತಿ ಇದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ನ್ಯಾಯಪೀಠದ ಗಮನ ಸೆಳೆದರು. ಇದನ್ನು ಆಲಿಸಿದ ನ್ಯಾಯಮೂರ್ತಿಗಳು ಪ್ರತಿವಾದಿಗಳಾದ ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಪಶ್ಚಿಮ ವಿಭಾಗದ ಪೊಲೀಸ್ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಸಿಬಿಐ ದಿಲ್ಲಿ ಮತ್ತು ಚೆನ್ನೈ ವಿಭಾಗದ ವಿಶೇಷ ತನಿಖಾ ದಳಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫಬ್ರವರಿ ೨೩ಕ್ಕೆ ಮುಂದೂಡಿದ್ದಾರೆ.

ಪ್ರಕರಣದ ವಿವರ: ಉಜಿರೆಯಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಅವರು ೨೦೧೨ರ ಅಕ್ಟೋಬರ್ ೯ರಂದು ನಾಪತ್ತೆಯಾಗಿದ್ದರು. ಮರುದಿನ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಮೊದಲಿಗೆ ಬೆಳ್ತಂಗಡಿ ಠಾಣೆಯಲ್ಲಿ ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಅವರು ತನ್ನ ಪುತ್ರಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಅನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು. ಪೊಲೀಸ್ ತನಿಖೆಯ ಬಗ್ಗೆ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಈ ಪ್ರಕರಣವನ್ನು ೨೦೧೩ರಲ್ಲಿ ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು. ೨೦೧೫ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ನಿಬಿಐ ನ್ಯಾಯಾಲಯಕ್ಕೆ ವಿಚಾರಣೆ ವರ್ಗಾವಣೆಗೊಂಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರು ಪ್ರಕರಣದ ಆರೋಪಿಯಾಗಿದ್ದ ಕಾರ್ಕಳದ ಸಂತೋಷ ರಾವ್ ಅವರನ್ನು ಅತ್ಯಾಚಾರ (ಐಪಿಸಿ ಸೆಕ್ಷನ್ ೩೭೬) ಮತ್ತು ಕೊಲೆ (ಐಪಿಸಿ ಸೆಕ್ಷನ್ ೩೦೨) ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿದ್ದರು. ಅಲ್ಲದೆ ಜೈಲಿನಲ್ಲಿದ್ದ ಸಂತೋಷ್ ರಾವ್‌ನನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದರು. ಇದೇ ವೇಳೆ ಕಳಪೆ ಮತ್ತು ದೋಷಪೂರಿತ ತನಿಖೆ ನಡೆಸಿರುವ ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಪ್ರಕರಣವನ್ನು ಖುಲಾಸೆ ಸಮಿತಿಯ ಮುಂದೆ ಇಡಬೇಕು ಎಂದು ನಿರ್ದೇಶಿಸಿದ್ದ ನ್ಯಾಯಾಧೀಶರು ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಯು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಕುಸುಮಾವತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಪ್ರತಿವಾದಿಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here