ಕರಿಮಣೇಲು : ಕಟ್ಟಡ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಿದ ವೇಣೂರು ಗ್ರಾ.ಪಂ.-ಶೀಘ್ರದಲ್ಲೇ ಅಗತ್ಯ ಪರವಾನಗಿ ಪತ್ರಗಳು ಸಿಗುವ ವಿಶ್ವಾಸವಿದೆ ಎಂದ ಬ್ರೈಟ್ ಹಾರಿಜಾನ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ

0

ವೇಣೂರು: ಬೆಳ್ತಂಗಡಿಯ ವೇಣೂರಿನ ಕರಿಮಣೇಲು ಎಂಬಲ್ಲಿ ಪರವಾನಗಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅಗತ್ಯ ಪರವಾನಗಿ ಪತ್ರಗಳನ್ನು ಪಡೆದುಕೊಂಡ ನಂತರ ಕಾಮಗಾರಿ ನಡೆಸುವಂತೆ ವೇಣೂರು ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಅವರು ಬ್ರೈಟ್ ಹಾರಿಜಾನ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಗ್ರಾ.ಪಂ. ಪಿಡಿಒ ಅವರು ಸ್ಥಳದಲ್ಲಿ ನೊಟೀಸ್ ಟೇಪ್‌ನ್ನು ಅಳವಡಿಸಿ, ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಬೇಕು. ಕಾಮಗಾರಿ ಮುಂದುವರಿಸಬಾರದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರೈಟ್ ಹಾರಿಜಾನ್ ಇಂಟರ್ ನ್ಯಾಷನಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಶರತ್ ಗೋರೆ ಅವರು, ನಾವು ಈಗಾಗಲೇ ಕಾಮಗಾರಿ ನಿಲ್ಲಿಸಿದ್ದೇವೆ. ಅಗತ್ಯ ಪರವಾನಗಿ ಪತ್ರಗಳು ಶೀಘ್ರದಲ್ಲೇ ಸಿಗಲಿದ್ದು, ನಂತರ ಕಟ್ಟಡ ಕಾಮಗಾರಿ ಮುಂದುವರಿಸುತ್ತೇವೆ. ನಮ್ಮ ಶಾಲೆ ನಿರ್ಮಾಣಕ್ಕೆ ಸ್ಥಳೀಯರು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲರೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಕಟ್ಟಡ ರೋಡ್ ಮಾರ್ಜಿನ್‌ನಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಜನರ ಅನುಕೂಲಕ್ಕಾಗಿ ನಾವು ಇಲ್ಲಿ ಸೇತುವೆ ನಿರ್ಮಾಣವನ್ನೂ ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದೇವೆ. ಇದರಿಂದ ಸ್ಥಳೀಯ ೨೦ ಮನೆಗಳಿಗೆ ಅನುಕೂಲವಾಗಲಿದೆ. ಕರಿಮಣೇಲಿನಲ್ಲಿ ೧೨ ಫೀಟ್ ರಸ್ತೆ ಮಾಡಿಕೊಡುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳ್ತಂಗಡಿಯ ಶೇಖರ್ ಲಾಯಿಲ ಎಂಬವರು ಕರಿಮಣೇಲಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ತಾಲೂಕು ಪಂಚಾಯತ್ ಇ.ಒ. ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಇ.ಒ. ಅವರು ವೇಣೂರು ಗ್ರಾ.ಪಂ. ಪಿಡಿಒಗೆ ಸೂಚಿಸಿದ್ದರು.

LEAVE A REPLY

Please enter your comment!
Please enter your name here