






ಬೆಳ್ತಂಗಡಿ : ಮಾಜಿ ಶಾಸಕ ಕೀರ್ತಿಶೇಶ ದಿ| ಕೆ. ವಸಂತ ಬಂಗೇರ ಅಭಿಮಾನಿಗಳ ಸಮಿತಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಸುಮಾರು ಐದು ದಶಕಗಳ ಕಾಲ ರಾಜಕೀಯ ರಂಗದಲ್ಲಿ ಸೇವೆ ಸಲ್ಲಿಸಿ ಜನಸೇವೆಗಾಗಿ ತನ್ನನ್ನು ತಾನು ಮುಡಿಪಾಗಿಟ್ಟು ಮೇ. 8 2024ರಂದು ವಿಧಿವಶರಾದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ ಮಾಜಿ ಶಾಸಕ ಕೀರ್ತಿಶೇಷ ದಿ| ಕೆ. ವಸಂತ ಬಂಗೇರರ 80ನೇ ಹುಟ್ಟುಹಬ್ಬದ 8ನೇ ವರ್ಷದ ಬೃಹತ್ ರಕ್ತದಾನ ಶಿಬಿರದ ಪತ್ರಿಕಾಗೋಷ್ಠಿಯು ಜ.14ರಂದು ಬೆಳ್ತಂಗಡಿಯ ಪ್ರವಾಸಿ ಬಂಗಲೆಯಲ್ಲಿ ನಡೆಯಿತು.
ಕೆ. ವಸಂತ ಬಂಗೇರ ಅಭಿಮಾನಿಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಎ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 7 ವರ್ಷದಿಂದ ದಿ| ಕೆ. ವಸಂತ ಬಂಗೇರರ ಹುಟ್ಟುಹಬ್ಬದ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ ವಸಂತ ಬಂಗೇರರ ಅಚ್ಚುಮೆಚ್ಚಿನ ಬೃಹತ್ ರಕ್ತದಾನ ಶಿಬಿರವನ್ನು ಜ.19ರಂದು ಶ್ರೀ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಳೆದ ಬಾರಿ ಅವರ ಹುಟ್ಟುಹಬ್ಬದ ದಿನವಾದ ಜ.15ರಂದೇ ರಕ್ತದಾನ ಶಿಬಿರ ಹಾಗೂ ಬಂಗೇರ ಬ್ರಿಗೇಡ್ ನ ಕಬಡ್ಡಿ ಪಂದ್ಯಾಟ ಆಯೋಜನೆ ಮಾಡಿದ್ದರಿಂದ ಎರಡೂ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವರ ಅಭಿಮಾನಿಗಳಿಗೆ ಗೊಂದಲ ಆಗಿದೆ. ಈ ಬಾರಿ ಆ ರೀತಿಯ ಗೊಂದಲಕ್ಕೆ ಅವಕಾಶ ನೀಡದೆ ಜ.19ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಮಾಜಿ ಶಾಸಕ ದಿ| ಕೆ. ವಸಂತ ಬಂಗೇರ ಅವರ ಸಾಧನೆಗಳ ಬಗ್ಗೆ ಹಾಗೂ ಅವರ ಜೀವನ ವಿಶೇಷತೆಯ ಬಗ್ಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಚೇತನ್ ರವರು ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ.


ಮಾಜಿ ಶಾಸಕರಿಗೆ ಪಕ್ಷಾತೀತವಾಗಿ ತಾಲೂಕು, ಜಿಲ್ಲಾ, ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲಾ ಜಾತಿ ಧರ್ಮದವರೊಡನೆ ಬೆರೆತು, ಬೇಧ ಭಾವ ರಹಿತ ಸೇವೆಯನ್ನು ನೀಡಿದ ಪರಿಣಾಮವಾಗಿ ಬಹುದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
ಕಳೆದ ಬಾರಿ 150 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಬಂದಿದ್ದು, ಸುಮಾರು 125 ಜನರು ಯಶಸ್ವಿಯಾಗಿ ರಕ್ತದಾನ ಮಾಡಿದ್ದಾರೆ. ಈ ಬಾರಿಯೂ ನೂರಕ್ಕೂ ಮಿಕ್ಕಿ ಜನರು ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ನಿರೀಕ್ಷೆ ಇದೆ. ರಕ್ತದಾನ ಮಾಡುವ ಮೂಲಕ ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮತ್ತು ರಾಜ್ಯದಲ್ಲಿ ರಾಜಕೀಯ ಚಾಪನ್ನು ಮೂಡಿಸಿದ ಧೀಮಂತ ನಾಯಕ ದಿ| ಕೆ. ವಸಂತ ಬಂಗೇರ ಅವರಿಗೆ ಗೌರವ ಸೂಚಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೆಸ್ಕಾಂ ನಿಗಮದ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ ಕುಟುಂಬಸ್ಥರು ಸೇರಿದಂತೆ ಪಕ್ಷಾತೀತವಾಗಿ ಅನೇಕ ಗಣ್ಯರು ಭಾಗವಹಿಸಲಿದ್ದು, ಬಂಗೇರರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೆ ವಸಂತ ಬಂಗೇರ ಅಭಿಮಾನಿಗಳ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಎ. ಹಾಗೂ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಂ ಕಲ್ಲಾಪು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ ವಸಂತ ಬಂಗೇರ ಅಭಿಮಾನಿಗಳ ಸಮಿತಿಯ ಅಧ್ಯಕ್ಷ ಈಶ್ವರ ಭಟ್ ಮಾಯಿಲ್ತೋಡಿ, ಜತೆ ಕಾರ್ಯದರ್ಶಿ ಸುನಿಲ್ ಜೈನ್, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಂ ಕಲ್ಲಾಪು, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮತ್ತು ಒಕ್ಕಲಿಗ ಗೌಡ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಕಲ್ಮಂಜ, ಹಾಗೂ ಇಸ್ಮಾಯಿಲ್ ಕೆ. ಉಪಸ್ಥಿತರಿದ್ದರು.









