ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ-ಗುಪ್ತಗಾಮಿನಿ ಕವಿತಾ ಕೌತುಕ-ಕವಿಗೋಷ್ಠಿ

0

ಬೆಳ್ತಂಗಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಮತ್ತು ಮುಂಡಾಜೆ ಗುಪ್ತಗಾಮಿನಿ ಸಾಹಿತ್ಯ ಶಾಲೆಯ ಸಹಭಾಗಿತ್ವದಲ್ಲಿ ಅಭಿಜಾತ ಕವಿಯತ್ರಿ ಕೊಪ್ಪಲ ಸುಶೀಲಾ ಬಾಯಿ ಮರಾಠೆ ಅವರ ಸಂಸ್ಮರಣ ದಿನವನ್ನು ಜ. 4ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉಜಿರೆ ಪಂಚಾಯತ್ ನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ಆಮಂತ್ರಣದ ಅಧ್ಯಕ್ಷೆ ವಿದ್ಯಾಶ್ರೀ ಅಡೂರು ಅವರು ಸುಶೀಲಾಬಾಯಿ ಮರಾಠೆ ಅವರ ಸಂಸ್ಮರಣೆಯನ್ನ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಂತಹ ಗುಪ್ತಗಾಮಿನಿ ಸಾಹಿತ್ಯ ಶಾಲೆಯ ಸಂಚಾಲಕ ಶ್ರೀಕರ ಮರಾಠೆ ಅವರು ಮಾತನಾಡಿ ಕವಿತೆ ಕಟ್ಟುವ ಕೌಶಲ್ಯದ ಬಗೆಗೆ, ಕವಿತೆ ಕಟ್ಟುವಾಗಿನ ಸವ್ಯ ಅಪಸವ್ಯಗಳ ಬಗೆಗೆ ಮಾತನಾಡುತ್ತಾ ಕಾವ್ಯ ಸರಸ್ವತಿ ಎಂಬುದು ಎಲ್ಲರ ಮನಸ್ಸಿನಲ್ಲಿ ನಿರಂತರ ಹರಿಯುವ ಗುಪ್ತಗಾಮಿನಿ ಅದನ್ನು ಗುರುತಿಸಿಕೊಳ್ಳುವುದೇ ಕೌಶಲ್ಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಸಂಸ್ಥಾಪಕ ವಿಜಯಕುಮಾರ್ ಜೈನ್ ಅವರು ಮಾತನಾಡಿದರು.

ಕವಿಗೋಷ್ಠಿಯ ಅಧ್ಯಕ್ಷೆ ಸುಮನ ಹೇರಳೆ, ತೀರ್ಪುಗಾರರಾದ ಆಶಾಮಯ್ಯ, ಆಮಂತ್ರಣ ಜಿಲ್ಲಾ ಘಟಕದ ಅಧ್ಯಕ್ಷೆ ವಿಂದ್ಯಾ ಎಸ್. ರೈ. ಕಡೆಶಿವಾಲಯ, ಜಿಲ್ಲಾ ನಿರ್ದೇಶಕ ಚೇತನ್ ಕುಮಾರ್ ಬಿ., ರಾಜ್ಯ ಸದಸ್ಯೆ ಆಶಾ ಅಡೂರ್, ಬಂಟ್ವಾಳ ಘಟಕದ ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ಉಪಸ್ಥಿತರಿದ್ದರು.

ನಾಡಿನ ಹಲವು ಭಾಗಗಳಿಂದ ಆಮಂತ್ರಿಸಿದ ಕವಿಗಳಿಂದ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ವಿಶಿಷ್ಟವಾದ ಕವಿಗೋಷ್ಠಿ ಇದಾಗಿದ್ದು ಕವಿತೆಯ ರಚನೆ ಮತ್ತು ವಾಚನದ ಆಧಾರದಲ್ಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಕವನ ರಚನೆಯಲ್ಲಿ ಹರೀಶ್ ವಿ. ನೆರಿಯ ಅವರು ಪ್ರಥಮ ಸ್ಥಾನವನ್ನು, ಸತ್ಯವತಿ ಸಿದ್ದ ಮೂಲೆ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಕವಿತೆಯ ವಾಚನದ ಸ್ಪರ್ಧೆಯಲ್ಲಿ ರಮ್ಯಾ ರಘುಪತಿ ಹೆಬ್ಬಾರ್ ಕೊಕ್ಕಡ ಅವರು ಪ್ರಥಮ ಸ್ಥಾನವನ್ನು ಮತ್ತು ಅಶೋಕ್ ಕಡೆ ಶಿವಾಲಯ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್. ರೈ ಅವರು ಕವಿ ಗೋಷ್ಠಿಗೆ ಚಾಲನೆಯನ್ನು ನೀಡಿದರು.

ಸೌಮ್ಯ ಕಾರಂತ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಆಶಾ ಅಡೂರ್ ಸ್ವಾಗತಿಸಿ, ರೇಣುಕಾ ಸುಧೀರ್ ಅರಸಿನಮಕ್ಕಿ, ಶ್ವೇತಾ ಗೋಡ್ಬೋಲೆ, ಸರೀನ್ ತಾಜ್ ಕಾಶಿಪಟ್ಣ ಅವರು ನಿರೂಪಿಸಿದರು. ಮಂಜು ಅವರು ಧನ್ಯವಾದವನ್ನು ಸಮರ್ಪಿಸಿದರು.

LEAVE A REPLY

Please enter your comment!
Please enter your name here