






ಬೆಳ್ತಂಗಡಿ: ಬೆಂಗಳೂರು ಫಕೀರ್ ಲೇಔಟ್ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮತ್ತು ಬುಲ್ಡೋಜರ್ ರಾಜಕೀಯ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್ ಅವರು ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಡಿ. 20ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಡೆಸಿದ ಕ್ರೂರ ಮತ್ತು ಅಮಾನವೀಯ ವಿಧ್ವಂಸಕ ಕೃತ್ಯ ತೀವ್ರ ಖಂಡನೀಯ ಎಂದರು.



ಜಿಲ್ಲಾ ಕಾರ್ಯದರ್ಶಿ ನವಾರ ಕಟ್ಟೆ ಮಾತನಾಡಿ ರಾಜ್ಯ ಸರ್ಕಾರದ ಬುಲ್ಡೋಜರ್ ರಾಜಕೀಯದಿಂದ ಸುಮಾರು ೩೫೦ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಬಾಧಿತ ನಿವಾಸಿಗಳು ಪ್ರಾಥಮಿಕವಾಗಿ ಮುಸ್ಲಿಂ ಫಕೀರ್ ಸಮುದಾಯದವರಾಗಿದ್ದು ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಕ್ರಮವು ನ್ಯಾಯ, ಮಾನವೀಯತೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳಿಗೆ ಗಂಭೀರ ದ್ರೋಹವಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಉತ್ತರ ಪ್ರದೇಶ ಸರ್ಕಾರದೊಂದಿಗೆ ಸಂಬಂಧಿಸಿದ ಬುಲ್ಡೋಜರ್ ಆಧಾರಿತ ನೀತಿಯನ್ನು ನಕಲು ಮಾಡುತ್ತಿದೆ. ಬಡವರನ್ನು ಗುರಿಯಾಗಿಸಿಕೊಂಡು ಪ್ರಬಲ ವರ್ಗವನ್ನು ರಕ್ಷಿಸುತ್ತಿದೆ. ಬಡವರ ಮನೆಗಳನ್ನು ರಾತ್ರೋರಾತ್ರಿ ಕೆಡವಲಾಯಿತು. ಪ್ರಭಾವಿ ಬಿಲ್ಡರ್‌ಗಳು ಬೆಂಗಳೂರಿನಾದ್ಯಂತ ಕೆರೆಗಳು ಮತ್ತು ಚರಂಡಿಗಳನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರೆಸಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದು ಆತಂಕಕಾರಿ ವಿಚಾರವಾಗಿದೆ ಎಂದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಮುಸ್ತಫಾ ಜಿ.ಕೆ. ಮತ್ತಿತರರು ಭಾಗವಹಿಸಿದ್ದರು.









