ನಡ: ಹಾಟ್ ಮಿಕ್ಸ್ ಘಟಕದಿಂದ ಜನರಿಗೆ ತೊಂದರೆ-ಪಿಐಎಲ್ ಸಲ್ಲಿಕೆ: ಹೈಕೋರ್ಟ್‌ನಿಂದ ನೋಟಿಸ್ ಜಾರಿ

0

ಬೆಳ್ತಂಗಡಿ: ಪರಿಸರ ಮಾಲಿನ್ಯದಿಂದ ತೊಂದರೆಯಾಗುತ್ತಿರುವ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ನಡ ಗ್ರಾಮದ ಮಲೆಯಡ್ಕ ಸಮೀಪ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಜನವಸತಿ ಬಳಿ ಕಾರ್ಯ ನಿರ್ವಹಿಸುತ್ತಿರುವ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಹಾಟ್ ಮಿಕ್ಸ್ ಘಟಕಕ್ಕೆ ನೋಟೀಸ್ ಜಾರಿ ಮಾಡಿದೆ.

ಘಟನೆಯ ವಿವರ: 2008ರಿಂದ ಉಜಿರೆ-ಸುರ್ಯ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್‌ನ ಮಿಕ್ಸಿಂಗ್ ಘಟಕದಿಂದ ಕಲುಷಿತ ನೀರು, ಹೊಗೆ ಬಿಡಲಾಗುತ್ತಿದೆ. ತ್ಯಾಜ್ಯದ ಅಸಮರ್ಪಕ ನಿರ್ವಹಣೆ ಮಾಡಲಾಗುತ್ತಿದೆ, ಗ್ರಾಮೀಣ ರಸ್ತೆಯಲ್ಲಿ ಎಗ್ಗಿಲ್ಲದೆ ಸಾಗುವ ಇವರ ಭಾರೀ ಟ್ರಕ್‌ನಿಂದ ಜನಸಾಮಾನ್ಯ ಹಾಗೂ ನಿತ್ಯ ಪ್ರಯಾಣಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಮಲೆಯಡ್ಕ, ಇಚ್ಚಾವು ಮತ್ತು ಕೋಡಿಜಾಲು ನಿವಾಸಿಗಳು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಂಜೆಯಿಂದ ಹಬ್ಬುವ ಕಮಟು ವಾಸನೆಯಿಂದ ಜನ ಉಸಿರಾಟದಂತಹ ಗಂಭೀರ ಸಮಸ್ಯೆಗೆ ಒಳಗಾಗಿದ್ದಾರೆ. ಮಕ್ಕಳು ಮತ್ತು ವೃದ್ಧರಲ್ಲಿ ಅಸ್ತಮಾ, ಹೃದೋಗ ಸಮಸ್ಯೆಗಳು ತಲೆದೋರಿವೆ ಎಂದು ವೈದ್ಯಕೀಯ ವರದಿಗಳು, ನೀರಿನ ಸ್ಯಾಂಪಲ್‌ಗಳು ಇತ್ಯಾದಿಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ನೆಲೆಸಿರುವ ಹಾಗೂ ಸಾಮಾನ್ಯ ಕೂಲಿ ಕಾರ್ಮಿಕರಿರುವ ಈ ಜನವಸತಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೈಗಾರಿಕೆ ಕಾರ್ಯ ನಿರ್ವಹಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾಮಾಜಿಕ ಕಳಕಳಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಮುಗ್ರೋಡಿ ಹಾಟ್ ಮಿಕ್ಸ್ ಘಟಕ, ಸರ್ಕಾರದ ಮುಖ್ಯ ಕಾರ್ಯದರ್ಶಿ, ತಹಶೀಲ್ದಾರ್ ಬೆಳ್ತಂಗಡಿ, ಜಿಲ್ಲಾಧಿಕಾರಿ ದ.ಕ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೋಟೀಸ್ ಜಾರಿ ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here