







ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯ ಮುಖಂಡರಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಪರಿಷ್ಕೃತ ಆದೇಶ ಹೊರಡಿಸಿರುವ ಪುತ್ತೂರು ಉಪವಿಭಾಗದ ದಂಡಾಧಿಕಾರಿಯೂ ಆಗಿರುವ ಸ್ಟೆಲ್ಲಾ ವರ್ಗೀಸ್ ಅವರು ಸೌಜನ್ಯ ಪರ ಹೋರಾಟಗಾರರೂ ಆಗಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ(೫೭ವ) ಅವರನ್ನು ೨೦೨೫ರ ಡಿಸೆಂಬರ್ ೧೬ರಿಂದ ೨೦೨೬ರ ಸೆಪ್ಟೆಂಬರ್ ೧೬ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಆದೇಶ ಮಾಡಿದ್ದಾರೆ.
೨ನೇ ಆದೇಶ: ಬಂಟ್ವಾಳ ಡಿವೈಎಸ್ಪಿಯವರ ಕೋರಿಕೆಯಂತೆ ಪದೇ ಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದರಿಂದ ರೌಡಿಶೀಟರ್ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದ.ಕ. ಜಿಲ್ಲೆಯಿಂದ ಗಡೀಪಾರು ಮಾಡಿ ಸೆ. ೧೭ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಹೇಶ್ ಶೆಟ್ಟಿಯವರ ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್ ಗಡೀಪಾರು ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದರು. ಗಡೀಪಾರು ಆದೇಶವನ್ನು ಕರ್ನಾಟಕ ಪೊಲೀಸ್ ಕಾಯ್ದೆಯ ಯಾವ ಕಲಂನಡಿ ಮಾಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಕಾರಣ ಸಹಿತ ತಿಳಿಸಿಲ್ಲವಾದ್ದರಿಂದ ಈ ಬಗ್ಗೆ ಮತ್ತೊಂದು ಆದೇಶ ಮಾಡಲು ಹೈಕೋರ್ಟ್ ಸಹಾಯಕ ಆಯುಕ್ತರಿಗೆ ಸೂಚಿಸಿತ್ತು. ರಿಟ್ ಪಿಟಿಶನ್ ಆದೇಶದ ಪ್ರತಿಯನ್ನು ಸ್ವೀಕರಿಸಿದ ೧೫ ದಿನದೊಳಗೆ ಆದೇಶ ಮಾಡುವಂತೆಯೂ ಹೈಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಎ.ಸಿ. ಕೋರ್ಟ್ನಲ್ಲಿ ವಿಚಾರಣೆ ನಡೆದು ಮತ್ತೆ ಗಡೀಪಾರಿನ ಆದೇಶ ಹೊರಡಿಸಲಾಗಿದೆ.


ಗಡೀಪಾರು ಆದೇಶ ಹೊರ ಬಿದ್ದ ಕೂಡಲೇ ಮಹೇಶ್ ಶೆಟ್ಟಿ ಅವರು ಭೂಗತರಾಗಿದ್ದು ಗಡಿಪಾರು ಆದೇಶ ಜಾರಿ ಮಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಶೆಟ್ಟಿ ಅವರ ಮನೆಗೆ ತೆರಳಿ ಮನೆಯ ಗೋಡೆಗೆ ಗಡೀಪಾರಿನ ಆದೇಶ ಪ್ರತಿ ಅಂಟಿಸಿದ್ದಾರೆ.
ಉಜಿರೆ: ಮೈಕ್ನಲ್ಲಿ ಪೊಲೀಸರಿಂದ ಪ್ರಕಟಣೆ
ಮಹೇಶ್ ಶೆಟ್ಟಿ ತಿಮರೋಡಿಯವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ೧೬-೧೨-೨೦೨೫ರಿಂದ ೧೬-೯-೨೦೨೬ರವರೆಗೆ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರು ಡಿ.೧೬ ರಂದು ಗಡಿಪಾರು ಮಾಡಿ ಆದೇಶ ಹೊರಡಿಸಿರುವ ಕುರಿತು ಡಿ.೧೮ರಂದು ಸಂಜೆ ೬ ಗಂಟೆಗೆ ಬೆಳ್ತಂಗಡಿ ಠಾಣಾ ಪೊಲೀಸರು ಉಜಿರೆ ಪೇಟೆಯಲ್ಲಿ ಮೈಕ್ನಲ್ಲಿ ಪ್ರಕಟಣೆ ಘೋಷಿಸಿದ್ದಾರೆ. ಗಡೀಪಾರು ಕುರಿತು ಸಾರ್ವಜನಿಕರ ಮುಂದೆ ಪೊಲೀಸರು ಪ್ರಕಟಣೆ ಓದಿ ಹೇಳಿದ್ದಾರೆ.








