







ಬೆಳ್ತಂಗಡಿ: ವಾಸ್ತವ ವಿಚಾರವನ್ನು ತಿರುಚಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಯೂ ಟ್ಯೂಬ್ ಚಾನೆಲ್ ಕುರಿತು ಅಪಪ್ರಚಾರ ನಡೆಸಿ ಪತ್ರಿಕೆಯ ಮತ್ತು ಚಾನೆಲ್ನ ವಿರುದ್ಧ ಜನರನ್ನು ಎತ್ತಿ ಕಟ್ಟಿ ಅವರಲ್ಲಿ ದ್ವೇಷ ಭಾವನೆ ಉಂಟು ಮಾಡಿ ಪತ್ರಿಕೆ, ಚಾನೆಲ್ಗೆ ಮಾತ್ರವಲ್ಲದೆ ಅದರ ಸಿಬ್ಬಂದಿಗಳಿಗೆ ಕೆಲಸಕ್ಕೆ ತೊಂದರೆ ಕೊಡುವ ಹಾಗೂ ಜೀವ ಹಾನಿ ಉಂಟು ಮಾಡುವ ಉzಶದಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿರುವ ಜನತಾ ಏಜೆಂಟ್ ಎಂಬ ಹೆಸರಿನ ಯೂ ಟ್ಯೂಬ್ ಚಾನೆಲ್ ಹಾಗೂ ಈ ಷಡ್ಯಂತ್ರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ಡಿ.೨೨ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ವಿವರ: ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಸುದ್ದಿ ನ್ಯೂಸ್ ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನೀಡಿರುವ ದೂರಿನಲ್ಲಿಕಳೆದ ೪೦ ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಸುದ್ದಿ ಬಿಡುಗಡೆ ವಾರಪತ್ರಿಕೆ ಕಾರ್ಯ ನಿರ್ವಹಿಸುತ್ತಿದ್ದು ತಾಲೂಕಿನಲ್ಲಿ ಅತೀ ಹೆಚ್ಚು ಪ್ರಸಾರ ಹೊಂದಿರುವ ಪತ್ರಿಕೆಯಾಗಿದೆ. ಜತೆಗೆ ಸುದ್ದಿ ಬಿಡುಗಡೆ ವೆಬ್ಸೈಟ್ ಮತ್ತು ಸುದ್ದಿ ಯೂ ಟ್ಯೂಬ್ ಚಾನೆಲ್ ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ಲಕ್ಷಾಂತರ ಓದುಗರನ್ನು ಸುದ್ದಿ ಬಿಡುಗಡೆ ಬಳಗ ಹೊಂದಿದೆ. ಅಪಾರ ಜನಬೆಂಬಲದೊಂದಿಗೆ ಸುದ್ದಿ ಬಿಡುಗಡೆ ಬಳಗ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದ ಮೂಲಕ ತಾಲೂಕಿನಲ್ಲಿ ನಂಬರ್ ೧ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹೀಗಿರುವಾಗ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಯೂ ಟ್ಯೂಬ್ ಚಾನೆಲ್ ಕುರಿತು ದುರುದ್ದೇಶಪೂರ್ವಕವಾಗಿ ವಾಸ್ತವ ವಿಚಾರವನ್ನು ತಿರುಚಿ ಅಪಪ್ರಚಾರ ನಡೆಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಬೆಳ್ತಂಗಡಿ ಪಟ್ಟಣದಲ್ಲಿ ೨೦೨೫ರ ಡಿಸೆಂಬರ್ ೧೬ರಂದು ನಡೆದ


ಕೊಂದವರು ಯಾರು-ನ್ಯಾಯ ಧರ್ಮಕ್ಕಾಗಿ ಆಗ್ರಹಿಸಿ ಮಹಿಳಾ ಸಮಾವೇಶ-ಜಾಥಾ’ ಕಾರ್ಯಕ್ರಮದ ಕುರಿತು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿದೆ. ಆದರೆ ಸುದ್ದಿ ಬಿಡುಗಡೆಯಲ್ಲಿ ಈ ಕಾರ್ಯಕ್ರಮದ ವರದಿಯನ್ನು ಪ್ರಕಟಿಸಿಲ್ಲ ಎಂದು ಜನತಾ ಏಜೆಂಟ್ ಎಂಬ ಯೂ ಟ್ಯೂಬ್ ಚಾನೆಲ್ನಲ್ಲಿ ಅಪಪ್ರಚಾರ ನಡೆಸಿ ಸುದ್ದಿ ಬಿಡುಗಡೆಯನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿ ವರದಿ ಪ್ರಸಾರ ಮಾಡಲಾಗಿದೆ. ಇತರ ಸ್ಥಳೀಯ ಪತ್ರಿಕೆಗಳಲ್ಲಿ ಈ ಸಮಾವೇಶದ ವರದಿಯೇ ಪ್ರಕಟವಾಗಿಲ್ಲವಾದರೂ ಅದನ್ನು ಸಂಪೂರ್ಣವಾಗಿ ಮರೆ ಮಾಚಿ ವರದಿ ಪ್ರಕಟವಾಗಿದ್ದರೂ ದುರುದ್ದೇಶಪೂರ್ವಕವಾಗಿ ಸುದ್ದಿ ಬಿಡುಗಡೆ ಕುರಿತು ಅಪಪ್ರಚಾರ ನಡೆಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಲಾಗಿದೆ.
ವಾಸ್ತವ ವಿಚಾರವನ್ನು ತಿರುಚಿ ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಯೂ ಟ್ಯೂಬ್ ಚಾನೆಲ್ ಕುರಿತು ಅಪಪ್ರಚಾರ ನಡೆಸಿ ಪತ್ರಿಕೆಯ ಮತ್ತು ಚಾನೆಲ್ನ ವಿರುದ್ಧ ಜನರನ್ನು ಎತ್ತಿ ಕಟ್ಟಿ ಅವರಲ್ಲಿ ದ್ವೇಷ ಭಾವನೆ ಉಂಟು ಮಾಡಿ ಪತ್ರಿಕೆ, ಚಾನೆಲ್ಗೆ ಮಾತ್ರವಲ್ಲ ಅದರ ಸಿಬ್ಬಂದಿಗಳಿಗೆ ಕೆಲಸಕ್ಕೆ ತೊಂದರೆ ಕೊಡುವ, ಜೀವ ಹಾನಿ ಉಂಟು ಮಾಡುವ ಉದ್ದೇಶದಿಂದ ಜನತಾ ಏಜೆಂಟ್ ಎಂಬ ಯೂ ಟ್ಯೂಬ್ ಚಾನೆಲ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯ ವಿರುದ್ಧವಾಗಿ ಬಾಯ್ಕಾಟ್ ಎಂಬ ವರದಿ ಪ್ರಸಾರ ಮಾಡಲಾಗಿದೆ. ಈ ರೀತಿಯ ವರದಿಗಳನ್ನು ಪ್ರಸಾರ ಮಾಡಿರುವ ಮತ್ತು ಸಮಾಜದಲ್ಲಿ ದ್ವೇಷ ಭಾವನೆ ಉಂಟು ಮಾಡುತ್ತಿರುವ ಜನತಾ ಏಜೆಂಟ್ ಎಂಬ ಹೆಸರಿನ ಯೂ ಟ್ಯೂಬ್ ಚಾನೆಲ್ ಮತ್ತು ಈ ಷಡ್ಯಂತ್ರದ ಹಿಂದಿರುವವರ ಕುರಿತು ತಾವು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿರುವ ಠಾಣಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.








