ಡಿ.24-25 : ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ, ಪರಿವಾರ ದೈವಗಳ ನರ್ತನ ಸೇವೆ

0

ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ ಡಿ. 24 ಮತ್ತು 25 ರಂದು ದೇವಸ್ಥಾನದ ಆನುವಂಶಿಕ ಮೋಕ್ತೆಸರ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ಉಪಸ್ಥಿತಿಯಲ್ಲಿ, ಶರತ್ ಕೃಷ್ಣ ಪಡ್ವೇಟನ್ನಾಯರ ಮಾರ್ಗದರ್ಶನದಲ್ಲಿ, ವೇ. ಮೂ. ನೀಲೇಶ್ವರ ಆಲಂಬಾಡಿ ಪದ್ಮ ನಾಭಾ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಡಿ. 24ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ಸ್ವಾಗತ, ದೇವತಾ ಪ್ರಾರ್ಥನೆ, ಗಣಪತಿ ಹೋಮ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ನಂತರ ಊರ ಭಕ್ತಾದಿಗಳಿಂದ ಬೆಳಾಲು ಪೇಟೆಯಿಂದ ಭವ್ಯ ಮೆರವಣಿಗೆಯೊಂದಿಗೆ ಹಸಿರುವಾಣಿ ಸಮರ್ಪಣೆ, ಬೆಳಿಗ್ಗೆ 11ರಿಂದ ಶ್ರೀ ಅನಂತ ಪದ್ಮನಾಭ ಮಹಿಳಾ ಕುಣಿತ ಭಜನಾ ತಂಡ, ಶ್ರೀ ಅನಂತೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ನಂತರ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ನಾಗದೇವರಿಗೆ ಕಲಶಾಭಿಷೇಕ, ತನು ತರ್ಪಣ, ಪರಿವಾರ ದೈವಗಳಿಗೆ ಕಲಶಾಭಿಷೇಕ ಪರ್ವ ತಂಬಿಲ ನಡೆದು ಬಳಿಕ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ವಿಶೇಷ ಸೇವೆಯಾಗಿ ಊರ ಋತ್ವಿಜರಿಂದ ಒಂದು ಮಂಡಲ ವಿಷ್ಣು ಸಹಸ್ರನಾಮ ಪಾರಾಯಣ ಸಂಪನ್ನಗೊಳ್ಳಲಿದೆ.
ಅಂದು ರಾತ್ರಿ ದೇವರಿಗೆ ರಂಗಪೂಜೆ, ದೇವರ ಬಲಿ ಹೊರಟು ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ನಡೆದ ಬಳಿಕ ಪ್ರಸಾದ ವಿತರಣೆಯಾಗಲಿದೆ. ಬಳಿಕ ಸಾಯಿ ಶಕ್ತಿ ಕಲಾ ಬಳಗ ಮಂಗಳೂರು ಇವರಿಂದ ಜೋಡು ಜೀಟಿಗೆ ತುಳು ಜನಪದ ಸಿರಿ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.25ರಂದು ಬೆಳಿಗ್ಗೆ ಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ ಬಟ್ಟಲು ಕಾಣಿಕೆ, ಸಿರಿಮುಡಿ ಗಂಧ ಪ್ರಸಾದ ವಿತರಣೆ, ಕಲಶ ಪೂಜೆ, ಮಹಾಪೂಜೆ, ಸಂಪ್ರೊಕ್ಷಣೆ ನಡೆಯಲಿದ್ದು. ಈ ಸಂದರ್ಭದಲ್ಲಿ ಅನಂತೇಶ್ವರ ಮಕ್ಕಳ ಕುಣಿತ ಭಜನಾ ತಂಡದಿಂದ ಭಜನೆ, ಮದ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 5ಗಂಟೆಯಿಂದ ದುರ್ಗಾ ಪೂಜೆ, ರಾತ್ರಿ ಪ್ರಸನ್ನ ರಂಗಪೂಜೆ, ಪ್ರಸಾದ ವಿತರಣೆ, ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ರಾತ್ರಿ ಪರಿವಾರ ದೈವಗಳಾದ ರಕ್ತೇಶ್ವರಿ, ಭೈರವ, ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಸಿರಿ ಸಿಂಗಾರ ನರ್ತನ ಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ನೋಟರಿ ವಕೀಲ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here