ಮತ್ತೆ ಗಡಿಪಾರು ನೋಟೀಸ್: ಎ.ಸಿ. ಕೋರ್ಟ್‌ಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ೨ ತಾಸು ವಿಚಾರಣೆ ನಡೆಸಿದ ಸ್ಟೆಲ್ಲಾ ವರ್ಗೀಸ್: ಪೊಲೀಸ್ ನಿರೀಕ್ಷಕ ಸುಬ್ಬಾಪುರಮಠ್ ಹಾಜರು

0

ಬೆಳ್ತಂಗಡಿ: ಈ ಹಿಂದೆ ದ.ಕ. ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಆದೇಶವಾಗಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿಯವರಿಗೆ ಹೈಕೋರ್ಟ್ ನಿರ್ದೇಶನದಂತೆ ಮತ್ತೆ ಗಡಿಪಾರು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅವರು ಡಿ.೮ರಂದು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ತಮ್ಮ ವಕೀಲರಾದ ವಿಜಯ ವಾಸು ಪೂಜಾರಿ ಮತ್ತು ವಿಶ್ವನಾಥ ಅವರೊಂದಿಗೆ ಸಹಾಯಕ ಆಯುಕ್ತರ ಕಚೇರಿಗೆ ಮಹೇಶ್ ಶೆಟ್ಟಿ ತಿಮರೋಡಿ ಹಾಜರಾಗಿದ್ದು ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ಸುಬ್ಬಾಪುರ್ ಮಠ ಅವರು ಆಗಮಿಸಿದ ಬಳಿಕ ವಿಚಾರಣೆ ಆರಂಭಗೊಂಡಿತು.

ಉಪವಿಭಾಗದ ಕಾರ್ಯನಿರ್ವಾಹಕ ದಂಡಾಧಿಕಾರಿಯೂ ಆಗಿರುವ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಸುಮಾರು ೨ ಗಂಟೆಯ ಸುದೀರ್ಘ ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಡಿ.೧೫ಕ್ಕೆ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಬೇಕಾಗಿರುವ ಕಾರಣ ಹೆಚ್ಚಿನ ಕಾಲಾವಕಾಶವನ್ನು ನೀಡಲು ಅಸಾಧ್ಯವೆಂದು ಹೇಳಿದ ಸ್ಟೆಲ್ಲಾ ವರ್ಗೀಸ್ ಅವರು ಮುಂದಿನ ವಿಚಾರಣೆಯನ್ನು ಡಿ.೧೧ಕ್ಕೆ ನಿಗದಿ ಪಡಿಸಿ ಮುಂದೂಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಮಿನಿವಿಧಾನ ಸೌಧದ ಸುತ್ತ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ಹೈಕೋರ್ಟ್ ನಿರ್ದೇಶನ: ಬಂಟ್ವಾಳ ಡಿವೈಎಸ್‌ಪಿಯವರ ಕೋರಿಕೆ ಮೇರೆಗೆ ದ.ಕ.ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಈ ಹಿಂದೆ ಜಾರಿ ಮಾಡಿದ್ದ ಆದೇಶದ ವಿರುದ್ಧ ಪ್ರಜಾಪ್ರಭುತ್ವ ವೇದಿಕೆಯ ಮುಖಂಡರೂ ಆಗಿರುವ ಸೌಜನ್ಯ ಪರ ಹೋರಾಟಗಾರರಾದ ಉಜಿರೆ ನಿವಾಸಿ ಮಹೇಶ್ ಶೆಟ್ಟಿ(೫೭ವ)ಯವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಸೆಕ್ಷನ್ ಸರಿಪಡಿಸಿ ಹೊಸದಾಗಿ ಮತ್ತೆ ನೋಟಿಸ್ ನೀಡುವಂತೆ ಎ.ಸಿ.ಯವರಿಗೆ ನಿರ್ದೇಶನ ನೀಡಿತ್ತು. ಅದರಂತೆ ಮಹೇಶ್ ಶೆಟ್ಟಿಯವರಿಗೆ ಮತ್ತೆ ಗಡಿಪಾರು ನೋಟಿಸ್ ನೀಡಿದ್ದ ಎ.ಸಿ.ಯವರು ಡಿ.೮ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ವಿಚಾರಣೆಗೆ ಹಾಜರಾಗಿದ್ದರು.

ಬಲವಾದ ಆಕ್ಷೇಪಣೆ ಸಲ್ಲಿಸಲಿದ್ದೇವೆ: ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಹಾಜರಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್ ಶೆಟ್ಟಿ ಪರ ವಕೀಲ ವಿಜಯ ವಾಸು ಪೂಜಾರಿ ಅವರು ಖುಲಾಸೆಯಾದ ೧೩ ಪ್ರಕರಣಗಳನ್ನಿಟ್ಟುಕೊಂಡು ಗಡಿಪಾರು ಮಾಡುವಂತೆ ಪೊಲೀಸರು ಕೇಳುತ್ತಿದ್ದಾರೆ. ಎರಡು ಪ್ರಕರಣದಲ್ಲಿ ಬಿ ರಿಪೋರ್ಟ್ ಆಗಿದೆ. ಖುಲಾಸೆಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮೇಲ್ಮನವಿಯನ್ನು ಸಲ್ಲಿಸದೆ ಒಪ್ಪಿಕೊಂಡಿದ್ದಾರೆ. ಸೆಕ್ಷನ್ ೫೫ಎ ಹಾಗೂ ೫೫ಬಿ ಯಾವುದರಲ್ಲಿ ನೋಟಿಸ್ ನೀಡಿದ್ದು ಎಂದು ಹೈಕೋರ್ಟ್ ಸ್ಪಷ್ಟಿಕರಣ ಕೇಳಿದೆ. ಮಹೇಶ್ ಶೆಟ್ಟಿಯವರು ದರೋಡೆ ಮಾಡಿಲ್ಲ. ಅವರ ಭಾಷಣದಿಂದ ಎಲ್ಲಿಯೂ ಕೋಮು ಗಲಭೆಯಾಗಿಲ್ಲ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ೧೯೯೭-೯೮ರಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪೊಲೀಸರು ಇವರನ್ನು ಗಡಿಪಾರು ಮಾಡಬೇಕೆಂದು ಹೇಳುತ್ತಿದ್ದಾರೆ. ಅರ್ಜಿಗೆ ಎ.ಸಿ. ಕೋರ್ಟ್‌ಗೆ ಬಲವಾದ ಆಕ್ಷೇಪಣೆಯನ್ನು ಸಲ್ಲಿಸಲಿದ್ದು ಕೋರ್ಟ್ ಅವಕಾಶ ನೀಡಿದೆ. ಡಿ.೧೧ಕ್ಕೆ ಲಿಖಿತ ಆಕ್ಷೇಪಣೆಯನ್ನು ಸಲ್ಲಿಸಲಿzವೆ. ಆದೇಶವನ್ನು ಮುಂದುವರಿಸಿದರೆ ಹೈಕೋರ್ಟ್‌ನಲ್ಲಿ ಈ ಬಗ್ಗೆ ಅಗತ್ಯ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here