ಯಕ್ಷ ಕಲಾವಿದರಾದ ಲಕ್ಷ್ಮಣಗೌಡ ಬೆಳಾಲ್‌ ಯಕ್ಷಸಿರಿ, ಗೇರುಕಟ್ಟೆ ದಾಸಪ್ಪಗೌಡ, ವೇಣೂರಿನ ಸದಾಶಿವ ಕುಲಾಲ್‌ಗೆ ಯಕ್ಷಸಿರಿ ಪ್ರಶಸ್ತಿ

0

ಬೆಳ್ತಂಗಡಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ 5 ಜನ ವಿದ್ವಾಂಸರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಕಲಾವಿದರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ, 3 ಜನ ಪುಸ್ತಕ ಬಹುಮಾನ ಪ್ರಶಸ್ತಿಗೆ ಹಾಗೂ ದಿ|| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಒಬ್ಬರನ್ನು ಆಯ್ಕೆ ಮಾಡಿದೆ.

ಅಕಾಡೆಮಿಯ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ 10 ಜನ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಬೆಳ್ತಂಗಡಿ ತಾಲೂಕಿನ ಲಕ್ಷ್ಮಣಗೌಡ ಬೆಳಾಲ್, ಗೇರುಕಟ್ಟೆಯ ದಾಸಪ್ಪಗೌಡರ, ವೇಣೂರಿನ ಸದಾಶಿವ ಕುಲಾಲ್ ಕೂಡ ಆಯ್ಕೆಯಾಗಿದ್ದಾರೆ. ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.25000/-ಗಳ ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು.

2025ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ದತ್ತಿನಿಧಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.21ರಂದು ಉಡುಪಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿಯಲ್ಲಿ ನಡೆಸಲಾಗುವುದು. ಇಲಾಖಾ ಸಚಿವರು, ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರ ಕುರಿತು

  1. ಲಕ್ಷ್ಮಣ ಗೌಡ

ಬೇಂಕ್ರಗೌಡ ಮತ್ತು ಲಕ್ಷ್ಮೀ ದಂಪತಿಗಳ ಪುತ್ರನಾಗಿ 1957ರಲ್ಲಿ ಜನಿಸಿದ ಲಕ್ಷ್ಮಣ ಗೌಡರು, ಬಾಲ್ಯದ ಬಡತನದ ಕಾರಣ ಪ್ರಾಥಮಿಕ ಶಿಕ್ಷಣವನ್ನು 7ನೇ ತರಗತಿಗೆ ಮುಗಿಸಿ, ಕಲಾಮಾತೆಯ ಸೇವೆಗೆ 1974ರಲ್ಲಿ ಸೇರ್ಪಡೆಗೊಂಡರು. ಶ್ರೀ ಧರ್ಮಸ್ಥಳ ಮಂಜುನಾಥ ಲಲಿತಕಲಾ ಕೇಂದ್ರದಲ್ಲಿ ದಿ| ನಾಟ್ಯಾಚಾರ್ಯ ಪಡ್ರೆ ಚಂದುರವರಲ್ಲಿ ಯಕ್ಷಗಾನ ನೃತ್ಯಭ್ಯಾಸವನ್ನು ಮಾಡಿ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಮೇಳಕ್ಕೆ ಬಾಲ ಕಲಾವಿದನಾಗಿ ಸೇರ್ಪಡೆಗೊಂಡರು. ಸ್ವಯಂ ಸಾಧನೆಯಿಂದ 3ನೇ ವರ್ಷಕ್ಕೆ ಮುಖ್ಯ ಸ್ತ್ರೀ ಪಾತ್ರಧಾರಿಯಾಗಿ ಪ್ರಗತಿ ಸಾಧಿಸಿದ್ದು, ಮೇರು ಭಾಗವತರಾದ ಬಲಿಪ ನಾರಾಯಣರ ಗರಡಿಯಲ್ಲಿ ಪ್ರಮೀಳೆ, ಶಶಿಪ್ರಭೆ, ದಮಯಂತಿಯಲ್ಲಿ ಶ್ರೀದೇವಿ ಮುಂತಾದ ಸ್ತ್ರೀ ಪಾತ್ರಗಳಲ್ಲಿಯೂ ಶ್ರೀಕೃಷ್ಣ, ಶ್ರೀರಾಮ, ಹನುಮಂತ, ಜಯಂತ, ಬಭ್ರುವಾಹನ, ಮನ್ಮಥ, ಶಿವ, ಗಂಡು ವೇಷಗಳಲ್ಲಿಯೂ ನಟಿಸಿ ಪ್ರೇಕ್ಷಕ, ವ್ಯವಸ್ಥಾಪಕ ಸಹ ಕಲಾವಿದರು ಮೆಚ್ಚಿದ ಧ್ರುವ ತಾರೆಯಾಗಿದ್ದಾರೆ.

  1. ದಾಸಪ್ಪಗೌಡ ಗೇರುಕಟ್ಟೆ, ತೆಂಕುತಿಟ್ಟು

ಕಲೆಯ ನೆಲೆ ನೆಲೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮದ ದರ್ಣಪ್ಪ ಗೌಡ ಮತ್ತು ದೇಜಮ್ಮ ಅವರಿಗೆ ನಾಲ್ಕನೇ ಮಗನಾಗಿ 1964ರಲ್ಲಿ ಜನಿಸಿದ ದಾಸಪ್ಪಗೌಡ ಅವರು ನಾಲ್ಕನೇ ತರಗತಿಗೆ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿ, ಹದಿನಾಲ್ಕನೇ ವಯಸ್ಸಿನಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡು ಪ್ರಹ್ಲಾದ, ಲೋಹಿತಾಶ್ವ, ಶಕ್ತಮಾಕಾರ್ಂಡೇಯ, ಕಂಡ ಮುಂಡರ ಹೆಮ್ಮೆಯ ಪಾತ್ರಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದಾರೆ. ತದನಂತರ 2 ವರ್ಷ ಪುತ್ತೂರು ಮೇಳದಲ್ಲಿ ತಿರುಗಾಟ, 1 ವರ್ಷ ಕಾಂತಾವರ ಮೇಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾಣರಲ್ಲಿ ಕರ್ನಾಟಕ ಮೇಳಕ್ಕೆ ಸೇರ್ಪಡೆಗೊಂಡು ಅದರಲ್ಲಿ ಬ್ರಹ್ಮ, ಜಿಲ್ಲಾಂಡಿಯ, ಬೀರುಪುಂಜ, ಕೇಶಾವತಿ, ಕೋಟಿ ಚೆನ್ನಯ್ಯ ಪಾಪಣ್ಣ ವಿಜಯದ ಪಾಪಣ್ಣ, ಶಬರಿಮಲೆ ಅಯ್ಯಪ್ಪ, ಕಾಡಮಲ್ಲಿಗೆಯ ಮಲ್ಲಿಗೆಯಾಡಿ, ಕೂಡದ ಗುಣಗಾ ಪ್ರಸಂಗದಲ್ಲಿ ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಈಗ ಸರಪಾಡಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದು, ಸರಳ ಸಜ್ಜನಿಕೆ ಮತ್ತು ಆತ್ಮೀಯತೆಯಿಂದ ಜನಪ್ರಿಯತೆ ಗಳಿಸಿದ್ದಾರೆ.

  1. ಸದಾಶಿವ ಕುಲಾಲ್, ತೆಂಕುತಿಟ್ಟು ಯಕ್ಷಗಾನ

ದಿ| ಕೃಷ್ಣಪ್ಪ ಮೂಲ್ಯ ಮತ್ತು ದಿ ಅಪ್ಪಿ ಮೂಲೈದಿ ದಂಪತಿಗಳ ಪುತ್ರನಾಗಿ 1981ರಲ್ಲಿ ಜನಿಸಿದ ಸದಾಶಿವ ಕುಲಾಲ್ ವೇಣೂರು ಅವರು 3ನೇ ತರಗತಿಯವರೆಗೆ ಶಾಲೆಯಲ್ಲಿ ಕಲಿತು ನಂತರ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಸುರತ್ಕಲ್ ಮೇಳದಲ್ಲಿ 28 ವರ್ಷ, ಮಂಗಳಾದೇವಿ ಮೇಳದಲ್ಲಿ 8 ವರ್ಷ, ಹನುಮಗಿರಿ ಮೇಳದಲ್ಲಿ 20 ವರ್ಷಗಳಂತೆ ಒಟ್ಟು 54 ವರ್ಷ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಅವರಿಗೆ ಹೆಸರು ತಂದ ಪಾತ್ರಗಳು ಅಭಿಮನ್ಯು, ಬಬ್ರುವಾಹನ, ಚಂಡ ಮುಂಡರು, ಅಶ್ಚದಾಮ, ಷಣ್ಮುಖ, ಲೀಲೆಯ ಕೃಷ್ಣ, ಲಕ್ಷಣ, ಗಂಡುಗಲಿ ಕುಮಾರ ರಾಮದ ಕುಮಾರ, ರಾಣಿ ರತ್ನಾವಳಿಯ ಉದಯನ, ಬಪ್ಪನಾಡು ಕ್ಷೇತ್ರ ಮಹಾತ್ಮಯ ಗುಳಿಗ ಅಗತ್ಯವಿದ್ದಲ್ಲಿ ಶ್ರೀ ವೇಷ ಕಿರೀಟ ವೇಷ ಮಾಡಿದ್ದಾರೆ.

LEAVE A REPLY

Please enter your comment!
Please enter your name here