




ಬೆಳ್ತಂಗಡಿ: ಭಾರತದ ಸಂವಿಧಾನ ದಿನಾಚರಣೆಯಂದು ದಯಾ ವಿಶೇಷ ಶಾಲೆಯಲ್ಲಿ ಸಂವಿಧಾನ ದಿನಾಚರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಯಾ ವಿಶೇಷ ಶಾಲೆಯ ನಿರ್ದೇಶಕ ಫಾ ವಿನೋದ್ ಮಸ್ಕರೇನಸ್, ವಾಟೆಕಾನ್ ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಸಿಂತಿಯಾ ಪಾಯಸ್, ಬಾಳೂರು ಆಟೋ ಚಾಲಕರ ಪ್ರತಿನಿಧಿ ಕೇಶವ್, ಡಾಲ್ಫಿ ಡಿಸೋಜಾ, ವಾಟೆಕಾನ್ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ದಿವ್ಯಾ, ವಿದ್ಯಾರ್ಥಿ ಪ್ರತಿನಿಧಿ ಲಾಸ್ಯ, ದಯಾ ವಿಶೇಷ ಶಾಲೆಯ ವಿದ್ಯಾರ್ಥಿ ಪ್ರತಿನಿಧಿ ಹರ್ಬಾರ, ದಯಾ ವಿಶೇಷ ಶಾಲೆಯ ಆಪ್ತಸಮಾಲೋಚಕಿ ಮೆರಿನ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿಂತಿಯಾ ಪಾಯಸ್ ಅವರು ಭಾರತದ ಸಂವಿಧಾನ ಪುಸ್ತಕಕ್ಕೆ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದು ನಮ್ಮ ಮಕ್ಕಳು ದಯಾ ಶಾಲೆಗೆ ಭೇಟಿ ನೀಡಿರುವುದು ಅವರ ಬಾಳಿನ ಅತ್ಯಂತ ಸುಮಧುರ ಕ್ಷಣಗಳಲ್ಲಿ ಒಂದು. ಇಂದು ಈ ಮಕ್ಕಳು ದಯಾ ಶಾಲೆಯ ಮಕ್ಕಳೊಂದಿಗೆ ಬೆರೆತು ಎಲ್ಲಾ ಚಟುವಟಿಕೆಗಳಲ್ಲಿ ಅವರೊಂದಿಗೆ ಭಾಗವಹಿಸಿದ ಈ ನೆನಪು, ಮುಂದೊಂದು ದಿನ ಅವರು ಬೆಳೆದು, ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುವ ಇತರ ಜನರಿಗೆ ನೆರವಾಗಲು ಅವರನ್ನು ಪ್ರೇರೇಪಿಸಬಲ್ಲದು. ಈ ಸಂಸ್ಥೆಯು ತನ್ನ ಸಿಬ್ಬಂದಿಗಳೊಡಗೂಡಿ ನಿಸ್ವಾರ್ಥ ಮನೋಭಾವದಿಂದ ಈ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಸೇವೆಯನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.



ಫಾ. ವಿನೋದ್ ಮಸ್ಕರೇನಸ್ ಅವರು ಮಾತನಾಡಿ, ಭಾರತದ ಸಂವಿಧಾನ ದಿನಾಚರಣೆಯ ಶುಭಾಶಯವನ್ನು ಎಲ್ಲರಿಗೂ ಕೋರುತ್ತಾ, ಈ ಸಂವಿಧಾನ ರಚನೆಯ ರೂವಾರಿಯಾದ ಡಾ.ಬಿ.ಆರ್ ಅಂಬೇಡ್ಕರ್ ರವರನ್ನು ಸ್ಮರಿಸಿದರು. ಇಂದು ನಮ್ಮ ಸಂವಿಧಾನದಿಂದಾಗಿ ಭಾರತದಲ್ಲಿ ಯಾವುದೇ ಜಾತಿ, ಧರ್ಮ, ಅಂತಸ್ತಿನ ಕಟ್ಟುಪಾಡುಗಳಿಲ್ಲದೇ ಎಲ್ಲಾ ಜನರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಸಮಾಜದಲ್ಲಿ ಎಷ್ಟೋ ಕೆಳಸ್ಥರದಲ್ಲಿರುವವರು ಎಂದು ಪರಿಗಣಿಸಲ್ಪಡಬಲ್ಲವರೂ ಕೂಡ ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಸಮಾಜಕ್ಕೆ, ನಮ್ಮ ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್ ಅಂಬೇಡ್ಕರ್ ರವರು ಮತ್ತು ಅವರೊಂದಿಗೆ ಅಂದು ಸಂವಿಧಾನ ರಚನೆಯಲ್ಲಿ ತೊಡಗಿಸಿಕೊಂಡವರು. ಇಂತಹ ನಮ್ಮ ಸಂವಿಧಾನವು ಇಂದು ಇಡೀ ವಿಶ್ವದಾದ್ಯಂತ ಎಲ್ಲರಿಂದಲೂ ಗೌರವಿಸಲ್ಪಡುತ್ತಿದೆ ಎನ್ನುವುದು ನಮ್ಮ ಭಾರತ ದೇಶಕ್ಕೆ ಒಂದು ಹೆಮ್ಮೆಯ ವಿಚಾರ ಮತ್ತು ಇನ್ನು ಮುಂದೆಯೂ ನಾವು ಈ ಸಂವಿಧಾನಕ್ಕೆ ಅಧೀನರಾಗಿ ಬಾಳಿ ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ದೈಹಿಕ ಶಿಕ್ಷಕಿ ಜೆನ್ವಿರಾ ವಾಸ್ ರವರು ಉಪಸ್ಥಿತರಿದ್ದ ಎಲ್ಲರಿಗೂ ಸಂವಿಧಾನ ಮುನ್ನುಡಿಯನ್ನು ಓದಿಸಿಕೊಟ್ಟು ಪ್ರತಿಜ್ಞಾ ಸ್ವೀಕಾರವನ್ನು ಮಾಡಿಸಿದರು. ನಂತರ ವಾಟೆಕಾನ್ ಸ.ಕಿ.ಪ್ರಾ.ಶಾಲೆಯ ಮಕ್ಕಳು ಹಾಗೂ ದಯಾ ವಿಶೇಷ ಶಾಲಾ ಮಕ್ಕಳು ದೇಶ ಪ್ರೇಮವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟರು.
ವಾಟೆಕಾನ್ ಸ.ಕಿ.ಪ್ರಾ.ಶಾಲೆಯ ಮಕ್ಕಳು ತಾವು ಉಳಿಕೆ ಮಾಡಿ ಒಟ್ಟುಗೂಡಿಸಿದ ಹಣದ ಹುಂಡಿಗಳನ್ನು ದಯಾ ಶಾಲಾ ನಿರ್ದೇಶಕರಿಗೆ ಹಸ್ತಾಂತರಿಸಿದರು. ಬಾಳೂರು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ವತಿಯಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅವರ ಸೇವೆಯನ್ನು ಪರಿಗಣಿಸಿ ಕಿರು ಸ್ಮರಣಿಕೆಯನ್ನು ವಿತರಿಸಿದರು. ಶಿಕ್ಷಕಿ ಸುಮನಶ್ರೀ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸ್ವಾಗತಿಸಿ, ಶಿಕ್ಷಕಿ ಜೋನ್ಸಿಲ್ಲಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಪ್ರಿಯಾ ಅವರು ವಂದಿಸಿದರು.









