ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ-ಆನೆ ಹಾವಳಿ ತಡೆಗೆ ತಕ್ಷಣ ಕ್ರಮಕ್ಕೆ ಸೂಚನೆ

0

ಕೊಕ್ಕಡ: ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರು ನ.18ರಂದು ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಸಂತ ಜೋನರ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದ ಪಾಲನಾ ಸಮಿತಿ ಸದಸ್ಯರು ಸ್ಪೀಕರ್‌ಗೆ ಸನ್ಮಾನ ಸಲ್ಲಿಸಿ ಆತ್ಮೀಯ ಸ್ವಾಗತ ಕೋರಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸನ್ಮಾನ ಸ್ವೀಕರಿಸಿದ ಯು ಟಿ ಖಾದರ್ ಅವರು ನೆರೆದಿದ್ದ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಚರ್ಚ್‌ನ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಸ್ಪಷ್ಟ ಭರವಸೆ ನೀಡಿದರು.

ಆನೆ ಹಾವಳಿ ಸಮಸ್ಯೆಗೆ ತಕ್ಷಣ ಸ್ಪಂದನೆ:
ಕಾಪಿನಬಾಗಿಲು ಕಾಂಚಿನಡ್ಕ ಪ್ರದೇಶಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಮಳೆಯಿಂದ ಹಾನಿಗೊಂಡಿರುವ ಆನೆ ಕಂದಕವನ್ನು ಶೀಘ್ರ ದುರಸ್ತಿ ಮಾಡಲು ಸಾರ್ವಜನಿಕರು ಮನವಿ ಸಲ್ಲಿಸಿದರು.

ತಕ್ಷಣ ಸ್ಪಂದಿಸಿದ ಸ್ಪೀಕರ್ ಯು ಟಿ ಖಾದರ್ ಅವರು ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಒಂದು ಜೀವಹಾನಿ ಸಂಭವಿಸಿದೆ. ಮತ್ತೆ ಅದು ಮರುಕಳಿಸದಂತೆ ಕಂದಕಗಳನ್ನು ತುರ್ತು ದುರಸ್ತಿ ಮಾಡಿ, ಆನೆಗಳು ಹಳ್ಳಿಗಳಿಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅವಘಡವಾದ ಮೇಲೆ ಪರಿಹಾರ ಘೋಷಿಸುವುದಕ್ಕಿಂತ ಮುಂಚಿತವಾಗಿ ಎಚ್ಚರಿಕೆ ಕ್ರಮ ಕೈಗೊಂಡು ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಪಿ ವರ್ಗೀಸ್ , ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾಮ ಪಂಚಾಯತಿನ ಮಾಜಿ ಸದಸ್ಯ ವರ್ಗೀಸ್, ಬೆಳ್ತಂಗಡಿ ಯುವ ಕಾಂಗ್ರೆಸ್ ಕಾರ್ಯದರ್ಶಿ ಜಾನ್ಸನ್ ಪಾಯ್ಸ್, ಚರ್ಚ್ ಪಾಲನಾ ಸಮಿತಿಯ ಸದಸ್ಯರಾದ ರಿತೇಶ್ ಸ್ಟ್ರೆಲ್ಲಾ, ಜಾನ್ಸನ್ ಗಲ್ಬಾವೋ, ಜಯಂತ್ ಡಿಸೋಜ, ಸುನಿಲ್ ಮಿನೇಜೆಸ್, ಪ್ರವೀಣ್ ಮೊಂತೇರೋ, ಸಿಲ್ವೆಸ್ಟರ್ ಡಿಸೋಜ, ವಿನ್ಸೆಂಟ್ ಮಿನೇಜೆಸ್ ಹಾಗೂ ಸಾರ್ವಜನಿಕರು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here