




ಕಕ್ಯಪದವು: ಉಳಿ ಗ್ರಾಮ ಪಂಚಾಯತ್ ಹಾಗೂ ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಂದ ನ. 19ರಂದು “ಸ್ವಚ್ಚತಾ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

“ಸ್ವಚ್ಛತೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ; ಜನರು ಮತ್ತು ಯುವಕರು ಸೇರಿಕೊಂಡಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ” ಎಂಬ ನಿಟ್ಟಿನಲ್ಲಿ, ಎಲ್.ಸಿ.ಆರ್. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಳಿ ಗ್ರಾಮ ಪಂಚಾಯತ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸಾರ್ವಜನಿಕ ರಸ್ತೆ, ಪಂಚಾಯತ್ ಪರಿಸರ, ಸಾರ್ವಜನಿಕ ಸ್ಥಳಗಳು ಹಾಗೂ ಗ್ರಾಮ ಪ್ರದೇಶಗಳಲ್ಲಿರುವ ಕಸ-ತ್ಯಾಜ್ಯಗಳನ್ನು ವಿಂಗಡಿಸಿ ಸ್ವಚ್ಛಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಉಳಿ ಗ್ರಾಮಪಂಚಾಯತಿನ ಪಿಡಿಓ ವಿದ್ಯಾಶ್ರೀ, ಪಂಚಾಯತಿನ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೋ, ಸಂಯೋಜಕ ಯಶವಂತ ಜಿ. ನಾಯಕ್, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಅಭಿಯಾನವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು. ಅಂತಿಮವಾಗಿ ಉಳಿ ಗ್ರಾಮಪಂಚಾಯತಿನ ಕಾರ್ಯದರ್ಶಿ ಯಶೋಧರ ಧನ್ಯವಾದಗಳನ್ನು ಸಲ್ಲಿಸಿದರು.









