ಉಜಿರೆ: ಶ್ರೀ ಧ. ಮಂ. ಕಾಲೇಜಿನಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಸಮಾರೋಪ-ದೇಶಭಕ್ತಿ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗಬಾರದು: ಡಾ. ಶೈಲಾ ಕೆ.ಎನ್.

0

ಉಜಿರೆ: ತ್ಯಾಗ ಬಲಿದಾನಗಳ ಮೂಲಕ ದೃಢ ದೇಶಭಕ್ತಿ ಪ್ರದರ್ಶಿಸಿದ ಅವೆಷ್ಟೋ ವೀರರ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಅವರಿಂದ ಪ್ರೇರಿತರಾಗಿ ನಮ್ಮ ದೇಶ ಭಕ್ತಿ ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಸೀಮಿತವಾಗದೆ, ನಿತ್ಯ ನಿರಂತರವಾಗಬೇಕು ಎಂದು ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶೈಲಾ ಕೆ.ಎನ್. ಅಭಿಪ್ರಾಯಪಟ್ಟರು.

ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಇತಿಹಾಸ ವಿಭಾಗವು ಕಾಲೇಜಿನಲ್ಲಿ ಆಯೋಜಿಸಿದ್ದ “ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ”ದ ಸಮರೋಪ ಸಮಾರಂಭ ಮತ್ತು “ಶೌರ್ಯದ ಪ್ರತಿಧ್ವನಿಗಳು : ದಕ್ಷಿಣ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರು” ಎಂಬ ವಿಷಯದ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ತಾಂತ್ರಿಕತೆ, ವಿಜ್ಞಾನ ಇವುಗಳಿಗೆ ಹೆಚ್ಚು ಒಗ್ಗಿಕೊಂಡಿರುವ ಪ್ರಸ್ತುತ ಯುವಜನಾಂಗ ದೇಶ ಬೆಳೆದು ಬಂದ ಹಾದಿಯ ಕಡೆಗೊಮ್ಮೆ ಕಣ್ಣು ಹಾಯಿಸುವ ಅವಶ್ಯಕತೆಯಿದೆ. ಕೆಲವರ ತ್ಯಾಗ ಬಲಿದಾನಗಳ ಪ್ರತಿಫಲವನ್ನು ನಾವುಗಳು ಇಂದು ಅನುಭವಿಸುತ್ತಿದ್ದೇವೆ.ಅಂತಹ ವೀರರ ಆದರ್ಶಗಳು, ಜೀವನ ಶೈಲಿ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕು ಎಂದರು.

ದಕ್ಷಿಣ ಕನ್ನಡದಲ್ಲೂ ಸಾಕಷ್ಟು ವೀರರು ಸ್ವಾತಂತ್ರ್ಯದ ಸಲುವಾಗಿ ಹೋರಾಡಿದ್ದಾರೆ. ವಿಪರ್ಯಾಸವೆಂದರೆ ಅವುಗಳಲ್ಲಿ ಹೆಚ್ಚಿನವರ ಬಗ್ಗೆ ನಮಗೆ ತಿಳಿದಿಲ್ಲ. ತೆರೆಮರೆಯಲ್ಲಿ ಮರೆಯಾಗಿರುವ ಇಂತಹ ಹೋರಾಟಗಾರರ ಬಗ್ಗೆ ನಾವು ತಿಳಿದುಕೊಂಡು ದೇಶಕ್ಕಾಗಿ ಅವರು ಮಾಡಿದ ತ್ಯಾಗ, ಬಲಿದಾನಗಳ ಬಗ್ಗೆ ಇತರರಿಗೆ ತಿಳಿಸುವ ಪ್ರಯತ್ನ ಮಾಡಿದಾಗ ಮಾತ್ರ ದೇಶಭಕ್ತಿ ಜಾಗೃತವಾಗುವುದು ಎಂದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸನ್ಮತಿ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಭಿಜ್ಞಾ ಉಪಾಧ್ಯಯ, ವಿದ್ಯಾರ್ಥಿ ಪ್ರತಿನಿಧಿಗಳಾದ ಗೌರವಿ ಮತ್ತು ಅಕ್ಷಯ್ ಹಾಗೂ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಸಲುವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಶಿರಾ ಮತ್ತು ಬಳಗದವರು ಪ್ರಾರ್ಥಿಸಿದರು. ತೃತೀಯ ಬಿ.ಎ ವಿದ್ಯಾರ್ಥಿಗಳಾದ ಮನ್ವಿತ್ ಸ್ವಾಗತಿಸಿ, ತೃತೀಯ ಬಿ.ಎ ವಿದ್ಯಾರ್ಥಿನಿಯರಾದ ಮಾನಸ ಮತ್ತು ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಅಕ್ಷಯ್ ವಂದಿಸಿದರು.

LEAVE A REPLY

Please enter your comment!
Please enter your name here