ಬೆಳ್ತಂಗಡಿ : ‘ನಾರಾಯಣ ಗುರುಗಳು ಸಮಾಜದ ಪ್ರೇರಣಾ ಶಕ್ತಿ. ಅವರ ವಿಚಾರಧಾರೆಯನ್ನು ಆಧರಿಸಿ ಸಮಾಜದಲ್ಲಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಯುವವಾಹಿನಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಘಟನೆ ಮೂಲಕ ಸಮಾಜ ಉತ್ತಮ ರೀತಿಯಲ್ಲಿ ಸದೃಢವಾಗಿ ಮುಂದುವರಿಯಲಿ’ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು ಹೇಳಿದರು.
ಅವರು ಅ. 5ರಂದು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ, ಯುವವಾಹಿನಿ ಮಹಿಳಾ ಸಂಚಲನ ಸಮಿತಿ ಸಹಕಾರದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಪ್ರಯುಕ್ತ ನಡೆದ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, ‘ವ್ಯಕ್ತಿಯನ್ನು ಸಮಾಜದ ಆಸ್ತಿಯಾಗಿ ಮಾಡುವಲ್ಲಿ ಯುವವಾಹಿನಿ ಕೆಲಸ ಶ್ಲಾಘನೀಯವಾದುದು. ನಾರಾಯಣ ಗುರುಗಳ ಆದರ್ಶವನ್ನು ಸಮಾಜದಲ್ಲಿ ಬೆಳೆಸುವುದೇ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ. ಯುವಕರು ಕೇವಲ ಕುಟುಂಬಕ್ಕೆ ಸೀಮಿತವಾಗಿದೆ ನಾರಾಯಣ ಗುರುಗಳ ವಿಚಾರದಡಿಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕು ‘ ಎಂದರು.
ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ. ಸನ್ಮಾನ ಸ್ವೀಕರಿಸಿ ಮಾತನಾಡಿ, ‘ ಎಲ್ಲರ ಬದುಕು ಚೆನ್ನಾಗಿರಬೇಕು ಎಂಬುದೇ ಯುವವಾಹಿನಿ ಕಾಳಜಿಯಾಗಿದೆ. ಎಲ್ಲರೂ ಉದ್ಯೋಗವಂತರಾಗಿ ಕುಟುಂಬ ಹಾಗೂ ಸಮಾಜಕ್ಕೆ ಆರ್ಥಿಕ ಶಕ್ತಿಯಾಗಿಸುವಲ್ಲಿ ಯುವವಾಹಿನಿ ಮಾರ್ಗದರ್ಶನ ಮಾಡುತ್ತಾ ಬಂದಿದೆ.
ಸಂಘಟನೆಯ ಕಾರ್ಯಗಳಿಗೆ ಪ್ರಶಸ್ತಿ ಬಂದಿರುವುದು ಅದು ಸಮಾಜಮುಖಿಯಾಗಿ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದರು. ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಸಾವ್ಯ ಉಪಸ್ಥಿತರಿದ್ದರು.
ಮಹಿಳಾ ಸಂಚಲನ ಸಮಿತಿ ಪ್ರಧಾನ ಸಂಚಾಲಕಿ ಲೀಲಾವತಿ ಪಣಕಜೆ ಪ್ರಾರ್ಥಿಸಿದರು. ಘಟಕದ ಮಾಜಿ ಅಧ್ಯಕ್ಷ ಎಂ.ಕೆ.ಪ್ರಸಾದ್ ಸ್ವಾಗತಿಸಿದರು. ಶ್ವೇತಾ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ಮಧುರಾ ರಾಘವ ವಂದಿಸಿದರು.