ಉಜಿರೆ: ಖಾತರ್ ಮುಹಮ್ಮದ್‌ ಕುಂಞಿ ನಿಧನ

0

ಉಜಿರೆ: ಕುಂಟಿನಿ‌ ನಿವಾಸಿ ನಿವೃತ್ತ ವಿದೇಶಿ ಉದ್ಯೋಗಿ ಖತಾರ್ ಮುಹಮ್ಮದ್ ಕುಂಞಿ (67) ಅವರು ಅ.3ರಂದು ಕುಂಟಿನಿ ಮಸ್ಜಿದ್ ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಂದಿನಂತೆ ಅವರು ನಮಾಝ್ ಗಾಗಿ ಮಸ್ಜಿದ್ ಗೆ ತೆರಳಿದ್ದವರು, ಹಠಾತ್ತನೇ ಹೃದಯಬೇನೆಗೊಳಗಾಗಿ ಕೊನೆಯುಸಿರೆಳೆದರು. ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ವೈದ್ಯರು ಅವರ ಮರಣವನ್ನು ಖಚಿತಪಡಿಸಿದರು.

ವಿದೇಶದ ಖತಾರ್ ಕ್ರೀಡಾ ಘಟಕವಾದ ಫಿಫಾ ಅಸೋಸಿಯೇಷನ್ ನಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ಊರಿಗೆ ಮರಳಿದ್ದರು. ಗ್ರಾ.ಪಂ. ಮಾಜಿ ಸದಸ್ಯರಾಗಿದ್ದ ಅವರು ಕಾಂಗ್ರೆಸ್ ಪಕ್ಷದ ತಾಲೂಕು ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಸೇವೆಯಲ್ಲಿದ್ದರು. ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಇದರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದ‌ ಅವರು ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

ಸಮಾಜ ಸೇವಕರಾಗಿದ್ದ ಅವರು ಖತಾರ್ ಮುಸ್ಲಿಂ ಅಸೋಸಿಯೇಷನ್ ಸಂಘಟನೆಯ ಹೆಸರಿನಲ್ಲಿ ಬೆಳ್ತಂಗಡಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆಯಾಗಿ ನೀಡುವಲ್ಲಿ ಪ್ರಮುಖ ಕಾರಣಕರ್ತರಾಗಿದ್ದರು. ಅಲ್ಲದೆ ತಾಲೂಕಿನ ಮಸೀದಿ ಮತ್ತು ಮದರಸಗಳಿಗೆ ಸಹಾಯ ಒದಗಿಸಿಕೊಟ್ಟಿದ್ದರು. ಗ್ರಾ.ಪಂ ಸದಸ್ಯರಾಗಿ ಅವರು ಮುಂದಿನ ತಿಂಗಳಿಗೆ 50 ವರ್ಷ ತುಂಬಿದ ಬಗ್ಗೆ ಕಾರ್ಯಕ್ರಮ ನಡೆಸುವ ಇರಾದೆಯಲ್ಲಿದ್ದರು. ಮೃತರು ಪತ್ನಿ ಖತೀಜಮ್ಮ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಅವರ ಪಾರ್ಥಿವ ಶರೀರ ಇದೀಗ ಕುಂಟಿನಿ‌ಮನೆಯಲ್ಲಿದ್ದು, ಅವರ ಮಗ ವಿದೇಶದಿಂದ ಯಾತ್ರೆ ಆರಂಭಿಸಿದ್ದಾರೆ. ಅವರು ಬಂದ ತಕ್ಷಣ ಉಜಿರೆ‌ ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here