ಇಂದಬೆಟ್ಟು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಇಂದಬೆಟ್ಟು ವಲಯದ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕಲ್ಲಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮುಖ್ಯೋಪಾಧ್ಯಾಯಿನಿ ದೀಪಾ ಅವರು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಮೂಲಕ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ನಾಲ್ಕು ಗೋಡೆಯ ಮಧ್ಯದಿಂದ ಹೊರಗೆ ಬಂದು ಮಾಹಿತಿಯೊಂದಿಗೆ ಅವರ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ಅವಕಾಶಗಳನ್ನು ಒದಗಿಸಿಕೊಟ್ಟಿದ್ದು ಕಾರ್ಯಕ್ರಮದ ಶಿಸ್ತುಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿವೆ ಎಂದರು.
ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಯಶೋಧರ ಅವರು ಜ್ಞಾನವಿಕಾಸ ಕೇಂದ್ರದ ಹುಟ್ಟು ಮತ್ತು ದ್ಯೆಯೋದ್ದೇಶದ ಬಗ್ಗೆ ತಿಳಿಸುತ್ತಾ ಕೇಂದ್ರದಲ್ಲಿ ಉತ್ತಮ ರೀತಿಯಲ್ಲಿ ಭಾಗವಹಿಸುದರೊಂದಿಗೆ ಕಾರ್ಯಕ್ರಮದ ಸದುಪಯೋಗವನ್ನು ಪಡೆಯುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ಅಡಿಲು, ಬಂಗಾಡಿ ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲಾಲ್, ಶಾಲೆಯ SDMC ಅಧ್ಯಕ್ಷ ಆನಂದ, ಒಕ್ಕೂಟದ ಅಧ್ಯಕ್ಷ ಸುಧಾಕರ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಕುಸುಮ ಅವರು ವಹಿಸಿದ್ದರು. ನಿರ್ಮಲ ಕೇಂದ್ರದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಮೇಲ್ವಿಚಾರಕಿ ಉಷಾ, ಸೇವಾ ಪ್ರತಿನಿಧಿ ಸುನಿತಾ ಹಾಗೂ ಪುಷ್ಪಾವತಿ ಉಪಸ್ಥಿತರಿದ್ದರು.
ವಾರಿಜ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರುತಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರ ವಸಂತ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸದಸ್ಯರಿಗೆ ಬಹುಮಾನವನ್ನು ವಿತರಿಸಲಾಯಿತು. ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಸೌಮ್ಯ ಧನ್ಯವಾದವಿತ್ತರು.