
ಧರ್ಮಸ್ಥಳ: ಪುದುವೆಟ್ಟು ಗ್ರಾಮದ ಮೇಲಿನಡ್ಕ ಪರಿಸರದಲ್ಲಿ ಕಳೆದ ಆ.27 ಮತ್ತು 28ರಂದು ಎರಡು ದಿನವೂ ರಾತ್ರಿ ವೇಳೆ ಒಂದಕ್ಕಿಂತ ಹೆಚ್ಚು ಕಾಡಾನೆಗಳು ಕೃಷಿ ತೋಟಕ್ಕೆ ದಾಳಿ ನಡೆಸಿ ತೆಂಗಿನ ಗಿಡಗಳು ಹಾಗು ಬಾಳೆಗಿಡಗಳನ್ನು ಧ್ವಂಸ ಗೊಳಿಸಿವೆ. ಸುರೇಂದ್ರ ರಾವ್ ಅವರ ಸುಮಾರು 17 ಕ್ಕೂ ಮಿಕ್ಕಿ ತೆಂಗಿನ ಗಿಡಗಳನ್ನು ಪುಡಿಗೈದಿವೆ. ಗಿರಿಧರ ರಾವ್ ಚಂದ್ರಶೇಖರ ಭಟ್, ಸುಬ್ರಾಯ ಭಟ್, ಮೋಹನ ರಾವ್, ಬೆಳ್ಳಿಯಪ್ಪ ಗೌಡರ ತೋಟಕ್ಕೆ ನುಗ್ಗಿ ತೆಂಗು ಹಾಗೂ ಬಾಳೆ ಗಿಡಗಳನ್ನು ಹೊಡೆದುರುಳಿಸಿವೆ.
ಸೂರ್ಯಕಾಂತ ರಾವ್, ಪ್ರಸನ್ನ ಹೆಬ್ಬಾರ್ ಅವರ ತೋಟಗಳಿಗೂ ನಿರಂತರ ದಾಳಿಗೈದು ಕೃಷಿ ನಾಶಪಡಿಸಿವೆ. ಕೆಲ ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಕಾಡಾನೆ ದಾಳಿಗೈದು ಬೇರೆಡೆಗೆ ತೆರಳಿದ್ದು ಇದೀಗ ಮತ್ತೆ ಅದೇ ಪ್ರದೇಶಕ್ಕೆ ದಾಳಿ ನಡೆಸಲಾರಂಭಿಸಿವೆ. ನಿರಂತರ ಕಾಡಾನೆ ದಾಳಿಯಿಂದ ಸ್ಥಳೀಯ ನಾಗರಿಕರು ಭಯಭೀತರಾಗಿದ್ದು ಸಂಚರಿಸಲು ಭಯಪಡುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೃಷಿಕರು, ರೈತರ ಹಿತರಕ್ಷಣೆಯನ್ನು ಪರಿಗಣಿಸಿ ಕಾಡಾನೆ ದಾಳಿಯಿಂದ ಮುಕ್ತಿ ದೊರೆಯುವಂತೆ ಮಾಡಬೇಕೆಂದು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.