
ಬೆಳ್ತಂಗಡಿ: ವ್ಯಸನ ಮುಕ್ತರಾಗಿ ದುಶ್ಚಟಗಳಿಂದ ದೂರವಿದ್ದು, ಸಹಬಾಳ್ವೆಯಿಂದ ಜೀವಿಸುವುದೇ ಯುವಕರ ಭವಿಷ್ಯಕ್ಕೆ ಬುನಾದಿ. ಶಿಕ್ಷಣವು ನಮ್ಮನ್ನು ಸ್ವಾವಲಂಬಿಯನ್ನಾಗಿಸಬೇಕು, ಆಗ ಮಾತ್ರ ಉಜ್ವಲ ಬದುಕನ್ನು ರೂಪಿಸಬಹುದು ಎಂದು ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಹಾಗೂ ಪ್ರಾಧ್ಯಾಪಕಿ ಡಾ. ಮಾಧುಮಾಲ ಕೆ. ತಿಳಿಸಿದರು.
ಮೂಡುಬಿದ್ರೆ ತೋಡಾರು ದ ಯೆನೆಪೋಯ ಕಾಲೇಜಿನಲ್ಲಿ ಆಂತರಿಕ ಭರವಸಾ ಖಾತರಿ ಕೋಶ ಹಾಗೂ ಮಾದಕ ವಸ್ತು ವಿರೋಧಿ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಆ.26ರಂದು ಏರ್ಪಡಿಸಿದ್ದ ‘ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ’ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾದಕ ವ್ಯಸನದ ಕಾರಣ, ಪರಿಣಾಮ, ಚಟಕ್ಕೆ ತುತ್ತಾದವರ ಸ್ಥಿತಿಗತಿಗಳು, ಇವುಗಳಿಂದ ಪಾರಾಗುವ ಮಾರ್ಗಗಳು, ಉಂಟಾಗುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತಂತೆ ಸೋದಾಹರಣವಾಗಿ ಅವರು ವಿಚಾರಗಳನ್ನು ಪ್ರಸ್ತಾಪಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಯೆನೆಪೋಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ್ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಜೀವನದಲ್ಲಿ ತಾತ್ಕಾಲಿಕವಾದ ಸಂತೋಷ ಯಾವತ್ತೂ ಒಳಿತಲ್ಲ, ಅದು ಭವಿಷ್ಯದಲ್ಲಿ ಆಪತ್ತನ್ನು ತರುವಂತೆ ಇರಬಾರದು. ಹಿತ – ಮಿತವಾದ ಸಂಭ್ರಮ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬುನಾದಿಯಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ. ರೋಶನ್ ಮೆಲ್ವಿನ್ ಡಿಸೋಜಾ ಅವರು ಉಪಸ್ಥಿತರಿದ್ದರು. ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಸಂಬಂಧಿಸಿದಂತೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಇಸ್ರಾ ನಾಯಬ್ ಸ್ವಾಗತಿಸಿ, ಅಸ್ನಾ ಅತಿಥಿ ಪರಿಚಯವನ್ನು ಮಾಡಿದರು. ನವೀರಾ ಆಲಂ ನಿರೂಪಿಸಿ, ನಾಗೇಂದ್ರ ಗೌಡ ವಂದಿಸಿದರು.