




ಬೆಳ್ತಂಗಡಿ: ಸಂಸ್ಕೃತ ಭಾಷೆಯು ಸಮುದ್ರದ ಆಳದಿಂದ ಹುಟ್ಟುವ ಮುತ್ತಿನಂತೆ. ಮುತ್ತನ್ನು ಪಡೆಯಲು ಚಿಪ್ಪನ್ನು ಒಡೆದು ನೋಡುವ ಅಗತ್ಯವಿದ್ದಂತೆ ಸಂಸ್ಕೃತವನ್ನು ಅರಿಯಲು ಅದರ ಪಾಠಪುಸ್ತಕದ ಚಿಪ್ಪುಗಳನ್ನು ಮೀರಿ ಒಳನೋಟ ಬೀರಿದರೆ ಅದರ ನಿಜವಾದ ಮೌಲ್ಯವು ನಮ್ಮ ಜೀವನವನ್ನು ಅಂದಗೊಳಿಸುತ್ತದೆ.


ಭಾಷೆಯು ವ್ಯಕ್ತಿಗೆ ಆತ್ಮವಿಶ್ವಾಸ ತುಂಬಿ ನೈತಿಕ ನೆಲೆಯಲ್ಲಿ ಬದುಕಿಗೆ ಪ್ರೇರಣೆಯಾಗಿ ಜೀವನದ ಎಲ್ಲ ಬಾಗಿಲುಗಳನ್ನು ತೆರೆಯುವ ಕೀಲಿಕೈ ಇದ್ದಂತೆ. ಭಾರತೀಯ ಜ್ಞಾನ ಪರಂಪರೆಗಳ ಮೂಲಾಧಾರವಾದ ಸಂಸ್ಕೃತ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ಸಂಸ್ಕೃತಿ, ಪರಂಪರೆ, ಮೌಲ್ಯ ಹಾಗೂ ಚಿಂತನೆಗಳ ಜೀವಂತ ಪ್ರತಿರೂಪ. ವಿದ್ಯಾರ್ಥಿಗಳು ಇದರ ಅಂತರಾಳವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಅವರು ನಿಜವಾದ ಜ್ಞಾನವನ್ನು ಸಂಪಾದಿಸುತ್ತಾರೆ. ನೋಡಿ ಆಲಿಸಿ ಸ್ವಯಂ ಚಿಂತನೆಯನ್ನು ಮಾಡಿ ವಿಷಯವನ್ನು ಮಥಿಸಿದರೆ ಕಲಿಕೆ ಪರಿಪೂರ್ಣವಾಗಿ ಬದುಕಿಗೆ ದಾರಿದೀಪವಾಗುವ ಬಗೆಯನ್ನು ಸಂಸ್ಕೃತವು ಸೂತ್ರ ರೂಪದಲ್ಲಿ ತಿಳಿಸಿಕೊಟ್ಟಿದೆ ಎಂದು ಪುತ್ತೂರು ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶ ಕುಮಾರ ಅಭಿಪ್ರಾಯಪಟ್ಟರು. ಮೂಡುಬಿದಿರೆಯ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ರಶ್ಮಿತಾ ಜೈನ್ ಮಾತನಾಡಿ ನವ ಚೇತನದ ಭಾಷೆಯಾದ ಸಂಸ್ಕೃತವು ವಿಶ್ವ ಭಾಷೆಯಾಗಿ, ಸಂಸ್ಕಾರದ ಬಿಂಬವಾಗಿ ಭಾರತವನ್ನು ಪ್ರತಿನಿಧಿಸುತ್ತಿದೆ. ಭಾರತದ ಪ್ರಾಚೀನ ಸಾಹಿತ್ಯ-ಜ್ಞಾನ ಪರಂಪರೆಯ ಶ್ರೀಮಂತಿಕೆಗೆ ಅನ್ಯದೇಶೀಯರೂ ಒಲವನ್ನು ತೋರುತ್ತಿರುವುದು ಇದಕ್ಕೆ ನಿದರ್ಶನ ಎಂದು ಸಂಸ್ಕೃತ ಮಹತ್ತಿಕೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಸಂಸ್ಕೃತ ಗೀತಗಾಯನದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಸಂಸ್ಕೃತ ಉಪನ್ಯಾಸಕ ತೇಜಸ್ವೀ ಭಟ್ ಸ್ವಾಗತಿಸಿ, ಗಗನ್ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಹಿಮಾನಿ ಶೆಟ್ಟಿ ನಿರೂಪಿಸಿ, ಸಂಸ್ಕೃತ ಶಿಕ್ಷಕ ಪಾರ್ಶ್ವನಾಥ ಜೈನ್ ವಂದಿಸಿದರು.









