
ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಹುಣ್ಸೆಕಟ್ಟೆಯಲ್ಲಿ ಆ.22ರಂದು ಬೆಳಿಗ್ಗೆ ಜಿಂಕೆಯೊಂದು ಗಾಯವಾಗಿ ಬಿದ್ದಿದ್ದು ಅರಣ್ಯ ಇಲಾಖಾ ಸಿಬ್ಬಂದಿಗಳು ಕ್ಲಪ್ತ ಸಮಯದಲ್ಲಿ ಧಾವಿಸಿ ಮುಂದಿನ ಚಿಕಿತ್ಸೆ ಗಾಗಿ ಕಳುಹಿಸಿ ಕೊಡಲಾಯಿತು.
ಅತೀ ಹೆಚ್ಚು ನಾಯಿಗಳ ಕಾಟದಿಂದ ಈ ಘಟನೆ ಸಂಭವಿಸಿದ್ದು, ನಾಯಿಗಳು ಕಾಡಿನಿಂದ ಅಟ್ಟಾಡಿಸಿ ನಾರಾಯಣ ಪೂಜಾರಿ ಅವರ ಮನೆಯ ಸಮೀಪವಿರುವ ಬಟ್ಟೆ ಒಗೆಯುವ ಕಲ್ಲಿಗೆ ತಾಗಿ ಗಾಯಗೊಂಡಿದೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿದ್ದು ಜಿಂಕೆಯನ್ನು ರವಾನಿಸಿದ್ದಾರೆ. ಹಲವು ದಿನಗಳಿಂದ ಈ ಭಾಗದಲ್ಲಿ ಬೀದಿ ನಾಯಿಗಳಿಂದ ಊರಿನವರಿಗೆ ಮತ್ತು ಕಾಡು ಪ್ರಾಣಿಗಳಿಗೂ ಸಮಸ್ಯೆ ಆಗುತ್ತಿದೆ.
15ಕ್ಕಿಂತ ಹೆಚ್ಚು ನಾಯಿಗಳು ಈ ಪ್ರದೇಶದಲ್ಲಿದ್ದು, ಶಾಲೆಗೆ ತೆರಳುವ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಪಾದಚಾರಿಗಳು, ಮಕ್ಕಳು ಭಯದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ನಗರ ಪಂಚಾಯತ್ ಇದರ ಬಗ್ಗೆ ತಕ್ಷಣ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದರು.