
ಉಜಿರೆ: ಬೆಳ್ತಂಗಡಿ ಮತ್ತು ಉಜಿರೆ ಮೆಸ್ಕಾಂ ಉಪ ವಿಭಾಗದ ಜನ ಸಂಪರ್ಕ ಸಭೆ ಮಂಗಳೂರು ಮೆಸ್ಕಾಂ ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಅವರ ಅಧ್ಯಕ್ಷತೆಯಲ್ಲಿ ಆ.21ರಂದು ಉಜಿರೆಯ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಜರಗಿತು.
ಬೆಳ್ತಂಗಡಿಯ ಶ್ರೀಕಾಂತ ಕಾಮತ್ ಮಾತನಾಡಿ ಬೆಳ್ತಂಗಡಿ ನಗರ ಪ್ರದೇಶದಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆ ಇದ್ದು, ನಗರ ಪ್ರದೇಶಕ್ಕೆ ಪ್ರತ್ಯೇಕ ಫೀಡರ್ ನಿರ್ಮಾಣಕ್ಕೆ ಆಗ್ರಹಿಸಿದರು ಈ ಕುರಿತು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಯಿತು.
ಬಂಗಾಡಿಯ ಲಕ್ಷ್ಮಣ ಗೌಡ ಅವರು ಇಂದಬೆಟ್ಟಿನಲ್ಲಿ 33/11ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಗೊಂಡರೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ಬೇಸಿಗೆಯಲ್ಲಿ ಲೋ ವೋಲ್ಟೇಜ್, ರೋಸ್ಟರ್, ಪವರ್ ಕಟ್ ಗಳಿಂದ ಕೃಷಿಕರಿಗೆ ತೊಂದರೆಗಳು ಉಂಟಾಗುತ್ತಿವೆ.
ಇಂದಬೆಟ್ಟಿನಲ್ಲಿ ಪ್ರತ್ಯೇಕ ಸಬ್ ಸ್ಟೇಷನ್ ನಿರ್ಮಾಣಗೊಂಡರೆ ಈಗ ಇಂದಬೆಟ್ಟು ಕಡೆಗೆ ವಿದ್ಯುತ್ ಪೂರೈಸುವ ಸಬ್ ಸ್ಟೇಷನ್ ನ ಹೊರೆಯು ಕಡಿಮೆಯಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಲಾಯಿತು.
ಉಜಿರೆ ಮೆಸ್ಕಾಂ ಉಪ ವಿಭಾಗದ ಬೆಳಾಲಿನಲ್ಲಿ 110 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣ ಕಾಮಗಾರಿ ಕುರಿತು ಗ್ರಾಹಕರು ಪ್ರಶ್ನಿಸಿದರು ಅರಣ್ಯ ಇಲಾಖೆಯಿಂದ ಜಾಗದ ಹಸ್ತಾಂತರವಾಗದ ಕಾರಣ ಯಾವುದೇ ಪ್ರಕ್ರಿಯೆಗಳನ್ನು ಮುಂದುವರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಲಾಯಿತು.
ನಿನ್ನಿಕಲ್ಲು 33/11ಕೆವಿ ವಿದ್ಯುತ್ ಸ್ಟೇಷನ್ ಕಾಮಗಾರಿ ಬಗ್ಗೆ, ಲೋ ವೋಲ್ಟೇಜ್, ತಂತಿ ಬದಲಾವಣೆ ಇತ್ಯಾದಿ ವಿಚಾರಗಳ ಕುರಿತು ಗ್ರಾಹಕರು ಚರ್ಚಿಸಿದರು. ಉಜಿರೆ ಮೆಸ್ಕಾಂ ಉಪ ವಿಭಾಗದಿಂದ 10, ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದಿಂದ 5 ದೂರುಗಳನ್ನು ಸ್ವೀಕರಿಸಲಾಯಿತು.
ಬಂಟ್ವಾಳ ಮೆಸ್ಕಾಂ ವಿಭಾಗದ ಇಇ ವೆಂಕಟೇಶ್ ಉಪಸ್ಥಿತರಿದ್ದರು. ಬೆಳ್ತಂಗಡಿ ಮೆಸ್ಕಾಂ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಸ್ವಾಗತಿಸಿದರು.ಉಜಿರೆ ಉಪ ವಿಭಾಗದ ಎಇಇ ಪ್ರವೀಣ್ ವಂದಿಸಿದರು.