ಧಾರ್ಮಿಕ ಶ್ರದ್ದಾ ಕೇಂದ್ರಗಳು ನಮ್ಮ ಸಂಸ್ಕೃತಿ, ಸಾಮರಸ್ಯದ ಜೀವಾಳ: ಡಾ. ರವೀಶ್ ಪಡುಮಲೆ

0

ಶಿಬರಾಜೆ: ಗ್ರಾಮದ ಪಾದೆ ಕ್ರೀಡಾಂಗಣದಲ್ಲಿ ಗ್ರಾಮಾಭಿವೃದ್ಧಿ ಕಾರ್ಯಕ್ರಮ ಅನುಷ್ಟಾನ ಸಮಿತಿ ಹಾಗೂ ದುರ್ಗಾಪರಮೇಶ್ವರಿ ಭಜನಾ ಮಂದಿರ ಮತ್ತು ಊರಿನ ಎಲ್ಲಾ ಸಂಘ–ಸಂಸ್ಥೆಗಳ ಸಹಕಾರದಿಂದ 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಭಕ್ತಿ, ಭಾವನಾಭರಿತವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ಮಾಡಿದ ಡಾ. ರವೀಶ್ ಪಡುಮಲೆ ಅವರು, “ನಮ್ಮ ಸಂಸ್ಕೃತಿ ಮತ್ತು ಸಾಮರಸ್ಯದ ಜೀವಾಳವೇ ಧಾರ್ಮಿಕ ಶ್ರದ್ದಾ ಕೇಂದ್ರಗಳು. ಭಾರತೀಯ ಸಮಾಜದಲ್ಲಿ ಇವು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲ, ನಮ್ಮ ಸಂಸ್ಕೃತಿಯ ನಿರಂತರತೆ ಹಾಗೂ ಸಮಾಜದ ಸಾಮರಸ್ಯದ ಆಧಾರಸ್ತಂಭಗಳಾಗಿವೆ. ದೇವಸ್ಥಾನಗಳು, ಮಠಗಳು, ತೀರ್ಥಕ್ಷೇತ್ರಗಳು ಜನರನ್ನು ಒಗ್ಗೂಡಿಸಿ, ಸಮಾನತೆ, ಸೇವಾ ಮನೋಭಾವ ಹಾಗೂ ಧರ್ಮ–ಸಂಸ್ಕೃತಿ ಪರಂಪರೆಯನ್ನು ಕಾಪಾಡುತ್ತವೆ” ಎಂದು ಅಭಿಪ್ರಾಯಪಟ್ಟರು. “ಈ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳು ಭೇದಭಾವ ಮರೆತು ಇಡೀ ಹಿಂದೂ ಸಮಾಜವನ್ನು ಒಗ್ಗೂಡಿಸುತ್ತವೆ. ಶ್ರೀ ಕೃಷ್ಣನ ಜೀವನದ ಕಥೆಗಳು ನಮಗೆ ಮಾರ್ಗದರ್ಶಕ. ಮಕ್ಕಳಿಗೆ ಕೃಷ್ಣನ ವೇಷ ಹಾಕಿ ವೇದಿಕೆಗೆ ಕರೆತಂದಷ್ಟರಿಂದ ಧರ್ಮ ಪಾಲನೆ ಆಗುವುದಿಲ್ಲ. ಕೃಷ್ಣನು ನೀಡಿದ ತತ್ವಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟು, ಜೀವನದಲ್ಲಿ ಪಾಲಿಸಲು ಕಲಿಸುವುದೇ ನಿಜವಾದ ಧರ್ಮ” ಎಂದು ಹೇಳಿದರು.

“ನಾವೆಲ್ಲರೂ ನಮ್ಮ ಮೂಲ ನಂಬಿಕೆಯನ್ನು ಉಳಿಸಿಕೊಂಡು, ಸಮಾಜದ ಆತ್ಮ ಮತ್ತು ಶಕ್ತಿಯ ಕೇಂದ್ರಗಳನ್ನು ಬೆಳೆಸೋಣ” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅದ್ಯಕ್ಷ ಸಂತೋಷ್ ಜೈನ್, ಗೌರವದ್ಯಕ್ಷ ನಿತ್ಯಾನಂದ ರೈ, ಮುಖ್ಯ ಅತಿಥಿಗಳಾಗಿ ರವೀಂದ್ರ ಬಿ., ಜೊಸೆಪ್ ಪಿರೇರಾ ಭಾಗವಹಿಸಿದರು. ನಿವೃತ್ತಿ ಶಿಕ್ಷಕಿ ರತ್ನಾ ಕೆ. ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ಡಾ. ಶೋಭಾರವರನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಸ್ಪರ್ಧೆಗಳು, ಮುಂತಾದ ಆಟೋಟಗಳು ಜರುಗಿದವು. ಊರಿನ ಅನೇಕ ಭಕ್ತರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಭಕ್ತಿ ಸಂಭ್ರಮವನ್ನು ಹೆಚ್ಚಿಸಿದರು.

LEAVE A REPLY

Please enter your comment!
Please enter your name here