
ಗುರುವಾಯನಕೆರೆ: “ಸ್ವಾತಂತ್ರವೆಂದರೆ ಅದು ಬ್ರಿಟಿಷರ ವಿರುದ್ಧದ ಹೋರಾಟವಲ್ಲ, ಯಾವುದೇ ಒಬ್ಬ ವ್ಯಕ್ತಿಯ ಅಭಿವ್ಯಕ್ತಿಗೆ ದಕ್ಕೆಯನ್ನು ಉಂಟುಮಾಡುವ ಯಾವುದೇ ಘಟನೆಗಳ ವಿರುದ್ಧವಾಗಿ ಪ್ರತಿಭಟಿಸುವುದೇ ನಿಜವಾದ ಸ್ವಾತಂತ್ರ ಇಂತಹ ಪ್ರತಿಭಟನಾ ಸಾಮರ್ಥ್ಯವನ್ನು ಇಂದು ಜನರು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಕ ನ.ಸೀತಾರಾಮ್ ಅವರು ವಿಷಾದ ವ್ಯಕ್ತಪಡಿಸಿದರು.
ಗುರುವಾಯನಕೆರೆಯ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ 79ನೇ ಸ್ವಾತಂತ್ರೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.” ಭಾರತವು ಮೂಲತಃ ಸಂಪತ್ಭರಿತವಾದ ರಾಷ್ಟ್ರ ಅಂದಿನ ಕಾಲದಲ್ಲಿಯೇ ನಮ್ಮ ದೇಶ ವಿಶ್ವಗುರುವಾಗಿತ್ತು. ಇಂತಹ ಭಾರತದ ಮೇಲೆ ಅನೇಕ ವಿದೇಶಿಯರು ದಾಳಿ ಮಾಡಿ ಭಾರತೀಯರನ್ನು ಸ್ವಾತಂತ್ರ್ಯ ಹೀನರನ್ನಾಗಿಸಿದರು. ಇಂತಹ ದುಸ್ಥಿತಿಗೆ ಭಾರತೀಯರೇ ಕಾರಣ ಎಂಬುದನ್ನು ನಾವೆಲ್ಲರೂ ಮನಗಾಣಬೇಕು. ಕುವೆಂಪುರವರ ವಾಣಿಯಂತೆ ನವ ಭಾರತದ ನಿರ್ಮಾಣಕ್ಕೆ ಇಂದಿನ ಯುವಕರು ವಿದ್ಯಾರ್ಥಿಗಳು ಶ್ರಮಿಸಬೇಕು”ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಅರಮಲೆ ಬೆಟ್ಟದ ಆಡಳಿತ ಮೊಕ್ತೇಸರ ರಾದ ಶ್ರೀ ಸುಕೇಶ್ ಕುಮಾರ್ ಜೈನ ರವರು ಮಾತನಾಡಿ ” ಎಕ್ಸೆಲ್ ಕಾಲೇಜು ಭವ್ಯ ಭವಿಷ್ಯವನ್ನು ಹೊಂದಿದೆ. ಇಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಟ್ಟಿಕೊಂಡು ಭವ್ಯ ರಾಷ್ಟ್ರವನ್ನು ಕಟ್ಟಲು ಮುಂದಾಗಬೇಕು” ಎಂದು ಕರೆ ನೀಡಿದರು.
ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಮಾತನಾಡಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಪ್ರತಿ ವಿದ್ಯಾರ್ಥಿಯು ದೇಶ ಮತ್ತು ತಮ್ಮ ಪೋಷಕರಿಗೆ ಆಸ್ತಿ ಆಗಬೇಕೆಂದು ಶುಭ ಹಾರೈಕೆ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಸೇರಿ ಹಲವು ಗಣ್ಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಹಾಡಿದ ರಾಷ್ಟ್ರಗೀತೆ, ಧ್ವಜಗೀತೆ ಮತ್ತು ವಂದೇ ಮಾತರಂ ಗೀತೆಗಳು ನರೆದಿದ್ದವರನ್ನು ರೋಮಾಂಚನಗೊಳಿಸಿದವು. ಪ್ರಥಮ ಪಿಯು ಎನ್.ಡಿ.ಎ ತರಗತಿಯ ವಿದ್ಯಾರ್ಥಿಗಳು ಶಿಸ್ತುಬದ್ಧ ಪಥ ಸಂಚಲನ ಮತ್ತು ಚೆಂಡೆ ವಾದ್ಯ ವಾಲಗಗಳ ಧ್ವನಿಯೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆ ತರಲಾಯಿತು. ರೋವರ್ಸ್, ರೇಂಜರ್ಸ್, ಎನ್.ಡಿ.ಎ ತರಗತಿ ಮಕ್ಕಳ ಶಿಸ್ತು ಬದ್ಧ ಸಾಲುಗಳು ಆಕರ್ಷಿತವಾಗಿದ್ದವು. ದ್ವಿತೀಯ ಎನ್.ಡಿ.ಎ ವಿದ್ಯಾರ್ಥಿಯಾದ ಸುಶಾಂತ್ ಗೌಡ ಅವರು ಕ್ಯಾಪ್ಟನ್ ಆಗಿ ಅತಿಥಿಗಳನ್ನು ಆಹ್ವಾನಿಸಿದರು.
ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಅರೆಮಲೆ ಬೆಟ್ಟ ಕ್ಯಾಂಪಸ್ನ ಪ್ರಾಂಶುಪಾಲ ಡಾ. ಪ್ರಜ್ವಲ್ ಅವರು, ಬೋಧಕ ಬೋಧಕೇತರ ಸಿಬ್ಬಂದಿಯವರು, ಎಕ್ಸೆಲ್ ಟೆಕ್ನೋ ಸ್ಕೂಲ್ ನ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.
ಮುಖ್ಯ ಅತಿಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಸ್ಮರಣಿಕೆಯನ್ನು ನೀಡುವ ಮೂಲಕ ಅಭಿನಂದಿಸಿದರು. ಉಪನ್ಯಾಸಕ ಅರುಣ್ ಕ್ಯಾಸ್ತೊಲಿನೋ ಮತ್ತು ಜೀವನ್ ಪ್ರದೀಪ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.