ಬೆಳ್ತಂಗಡಿ: ತುಳುನಾಡು ಒಕ್ಕೂಟದಿಂದ ಚೆನ್ನೆಮಣೆ ಸ್ಪರ್ಧೆ ಉದ್ಘಾಟನೆ

0

ಬೆಳ್ತಂಗಡಿ: ‘ತುಳುನಾಡಿನ ಬದುಕು ಮತ್ತು ಸಂಸ್ಕೃತಿಯ ಪ್ರತೀಕವಾಗಿರುವುದು ಚೆನ್ನೆಮಣೆ ಆಟವಾಗಿದೆ. ಮನೆಯಲ್ಲಿ ಮರೆಯಾಗುತ್ತಿರುವ ಈ ಆಟವನ್ನು ಸಂಘ ಸಂಸ್ಥೆಗಳು ಸ್ಪರ್ಧೆಯಾಗಿ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯ ‘ ಎಂದು ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಹೇಳಿದರು.

ಅವರು ಆ. 10ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ತುಳುನಾಡು ಒಕ್ಕೂಟ ಸಂಘಟನೆಯ ನೇತೃತ್ವದಲ್ಲಿ 5 ನೇ ವರ್ಷದ ‘ಚೆನ್ನೆಮಣೆ ಗೊಬ್ಬು ಪಂಥೋ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಬದುಕಿನ ಜತೆಗೆ ಭಾಷೆಯಲ್ಲಿ, ತಿನಿಸಲ್ಲಿ ವಿಭಿನ್ನವಾಗಿರುವ ಬದುಕು ತುಳುವರದ್ದು. ಪ್ರಪಂಚದ ಮೂಲೆ ಮೂಲೆಯಲ್ಲಿ ತುಳುವಿಗೆ ಅದರದೇ ಆದ ಪ್ರಾತಿನಿಧ್ಯ ತುಳುವರು ಮಾಡುತ್ತಾ ಬಂದಿದ್ದಾರೆ. ತುಳು ಭಾಷೆ ರಾಜ್ಯದ ಎರಡನೇ ಭಾಷೆಯಾಗಿ, ಸಂವಿಧಾನದ 8 ನೇ ಪರಿಚ್ಛೇದಕ್ಕೇ ಸೇರುವಂತಾಗಬೇಕು. ಹಾಗಾಗಿ ತುಳುನಾಡಿನ ವಿಚಾರಗಳಲ್ಲಿ ತುಳುವರು ಸದಾ ಒಮ್ಮನಸ್ಸು ಬೆಳೆಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ತುಳುನಾಡು ಒಕ್ಕೂಟದ ಅಧ್ಯಕ್ಷ ಶೇಖರ್ ಗೌಡತ್ತಿಗೆ ಮಾತನಾಡಿ, ‘ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ತುಳು ಕೂಡಾ ಒಂದು. ಜಗತ್ತನ್ನು ಆಳುವ ಶಕ್ತಿ ತುಳುನಾಡಿನ ಮಣ್ಣಿಗಿದೆ. ಚೆನ್ನೆಮಣೆ ಮನೆಯಲ್ಲಿ ಇರುವುದೇ ಪ್ರತಿಷ್ಠೆಯ, ಮನೆಯ ಹಿರಿಮೆಯ ದ್ಯೋತಕವಾಗಿದೆ’ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ವಹಿಸಿ ಮಾತನಾಡಿ, ‘ ನಮ್ಮ ಪರಂಪರೆಯ ಉಳಿಸುವಲ್ಲಿ ಚೆನ್ನೆಮಣೆಯೂ ಒಂದು. ಇಂದು ತುಳು ಭಾಷೆ, ತುಳು ಪರಂಪರೆಯ ಬಗೆಗೆ ಚಿಂತನೆಗಳು ಮಾಡುತ್ತಿರುವುದು ಭವಿಷ್ಯದ ತುಳು ಬದುಕಿಗೆ ಆಶಾದಾಯಕ ಬೆಳವಣಿಗೆಯಾಗಿದೆ ‘ ಎಂದರು.

ನಿವೃತ್ತ ಶಿಕ್ಷಕಿ ಜಯಂತಿ ಸುಧಾಕರ್, ಪತ್ರಕರ್ತ ಚೈತ್ರೇಶ್ ಇಳಂತಿಲ,
ಕರಂಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು, ಅರವಿಂದ ಪಂಡಿತ್ ಉಪಸ್ಥಿತರಿದ್ದರು.

ನಾಟಿ ವೈದ್ಯೆ ರೋಹಿಣಿ ಇವರನ್ನು ಗೌರವಿಸಲಾಯಿತು.

ಶಿಫಾನಿ ಬಿರ್ವ, ಅವನಿ ಬಿರ್ವ ಪ್ರಾರ್ಥಿಸಿದರು. ಉದಯ ಗೋಳಿಯಂಗಡಿ ಸ್ವಾಗತಿಸಿದರು. ತುಳುನಾಡು ಒಕ್ಕೂಟದ ತಾಲೂಕು ಕಾರ್ಯದರ್ಶಿ ರಾಜು ಬಿ. ಹೆಚ್. ಕಾರ್ಯಕ್ರಮ ನಿರೂಪಿಸಿದರು. ಒಕ್ಕೂಟದ ಸದಸ್ಯ ನವೀನ್ ಪೂಜಾರಿ ಸನ್ಮಾನ ಪತ್ರ ವಾಚಿಸಿ, ಸುರೇಶ್ ವಿ. ವಂದಿಸಿದರು.

LEAVE A REPLY

Please enter your comment!
Please enter your name here