ರಕ್ಷಾ ಬಂಧನದ ಹಬ್ಬ – ಸಾಮರಸ್ಯದ ಸಂಕೇತವಾಗಲಿ ಡಾ. ರವೀಶ್ ಪಡುಮಲೆ

0

ಬೆಳ್ತಂಗಡಿ: ಸನಾತನ ಹಿಂದೂ ಸಂಸ್ಕೃತಿಯ ತವರೂರು ನಮ್ಮ ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಹಿಂದೂ ಬಂಧುಗಳು ಆಚರಿಸುವ ಪ್ರೀತಿಯ ಹಬ್ಬಗಳಲ್ಲಿ ರಕ್ಷಾಬಂಧನ ಹಬ್ಬವು ಒಂದಾಗಿದೆ. ಇಂದು ಶ್ರಾವಣ ಮಾಸದ ಹುಣ್ಣಿಮೆಯ ಶನಿವಾರ (ಆ.9) ದಿವಸ. ದೇಶದೆಲ್ಲೆಡೆ ರಕ್ಷಾಬಂಧನವನ್ನು ಎಲ್ಲರೂ ಜೊತೆಯಾಗಿ ಆಚರಿಸುತ್ತೇವೆ. ಬಾಂಧವ್ಯದ ಬಂಧನವನ್ನು ರಕ್ಷೆಯ ಮೂಲಕ ಉಳಿಸುತ್ತೇನೆ ಎಂಬ ಧೈರ್ಯದ ಮಾತನ್ನು ನೀಡುವುದೇ ಈ ರಕ್ಷಾ ಬಂಧನ. ಸೋದರತೆಯ ಮೇಲಿನ ಶಾಶ್ವತ ಪ್ರೀತಿ, ಮಮತೆ ಮತ್ತು ಮಮಕಾರದ ಬದ್ಧತೆಯನ್ನು ರಕ್ಷಿಸುವ ಹಬ್ಬ ಎಂದು ನಾವು ಆಚರಿಸುತ್ತೇವೆ.

ವಿಶೇಷವಾಗಿ ಈ ದಿನದಂದು ಸಹೋದರಿಯೂ ತನ್ನ ಅಣ್ಣನ ಕೈಗೆ ರಾಖಿಯನ್ನು ಕಟ್ಟಿ, ತನ್ನ ಸೋದರತೆಯನ್ನು ಬಲಪಡಿಸುತ್ತಾಳೆ. ತನ್ನ ಮನಸ್ಸಿನಲ್ಲಿರುವ ಅಣ್ಣ ತಂಗಿ ಬಾಂಧವ್ಯವನ್ನು ಗಟ್ಟಿಗೊಳಿಸಿ ತನ್ನ ಅಣ್ಣನಿಗೆ ದೀರ್ಘಾಯುಷ್ಯ ಆರೋಗ್ಯ ಮತ್ತು ಸುಖಕರ ಜೀವನ ನಡೆಸಲಿ ಎಂದು ತಾನು ನಂಬಿದ ದೈವ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಕೇವಲ ಅಣ್ಣ ತಂಗಿ ಮಾತ್ರವಲ್ಲದೆ ಸ್ನೇಹಿತರು ಸಹೋದ್ಯೋಗಿಗಳು ಸಹ ರಾಖಿ ಕಟ್ಟಿಕೊಳ್ಳುವ ಮೂಲಕ ತಮ್ಮ ತಮ್ಮ ನಂಬಿಕೆಯನ್ನು ಭದ್ರಪಡಿಸಿಕೊಳ್ಳುತ್ತಾರೆ.

ರಕ್ಷಾ ಬಂಧನದ ಹಬ್ಬದ ಬಗೆಗೆ ಅನೇಕ ಹಿಂದಿನ ಕಥೆಗಳನ್ನು ನಾವು ತಿಳಿಯಬಹುದು. ಮಹಾದಾನಿ ಬಲಿಚಕ್ರವರ್ತಿಯ ಕಥೆಯಲ್ಲಿ, ಶ್ರೀ ವಿಷ್ಣು ದೇವರು ಬಲಿಯೊಂದಿಗೆ ಪಾತಾಳದಲ್ಲಿದ್ದಾಗ ಲಕ್ಷ್ಮಿ ದೇವಿಯು ಬ್ರಾಹ್ಮಣೀಯ ವೇಷ ತಾಳಿಕೊಂಡು ಬಲಿಯ ಅರಮನೆಗೆ ಬರುತ್ತಾಳೆ. ಕೆಲವು ದಿನಗಳ ನಂತರ ಶ್ರಾವಣ ಮಾಸದ ಹುಣ್ಣಿಮೆಯಂದು ಲಕ್ಷ್ಮೀದೇವಿಯು ಬಲಿಯ ಕೈಗೆ ರಾಖಿ ಕಟ್ಟಿ ಆತನನ್ನು ತನ್ನ ಸಹೋದರನನ್ನಾಗಿ ಸ್ವೀಕರಿಸಿದಳು. ಬಲಿ ಚಕ್ರವರ್ತಿಯು ಅಭಯದ ಮಾತುಗಳನ್ನು ನೀಡಿ ವಿಷ್ಣುವನ್ನು ಲಕ್ಷ್ಮಿಯೊಂದಿಗೆ ಕಳುಹಿಸಿದ ಕಥೆಯನ್ನು ಹಿಂದಿನ ಪೌರಾಣಿಕ ಕಥೆಯಲ್ಲಿ ನಾವು ತಿಳಿಯಬಹುದು. ಹಾಗೇನೇ ಮಹಾಭಾರತದ ಕಾಲಘಟ್ಟದಲ್ಲಿ ಲೋಕಪಾಲಕ ಶ್ರೀ ಕೃಷ್ಣದೇವರು ಶಿಶುಪಾಲನ ಜೊತೆ ಯುದ್ಧ ಮಾಡುತ್ತಿದ್ದರು.

ಆ ಸಂದರ್ಭ ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರವನ್ನು ಬಳಸಿದರು. ಶ್ರೀ ಕೃಷ್ಣನ ಬೆರಳಿಗೆ ಸಣ್ಣ ಗಾಯವಾಯಿತು. ಕೈ ಬೆರಳಿನಿಂದ ಚಿಮ್ಮುತ್ತಿದ್ದ ರಕ್ತವನ್ನು ನೋಡಿದ ದ್ರೌಪದಿ ವಸ್ತ್ರದ ಒಂದು ತುಂಡನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದಳು. ಶ್ರೀ ಕೃಷ್ಣನು ತನ್ನ ಮನಸ್ಸಿನಲ್ಲಿ ನೀನು ಯಾವ ಸಂಕಟದಲ್ಲಿ ಇದ್ದರೂ ನಿನ್ನ ರಕ್ಷಣೆಗೆ ನಾನು ಯಾವಾಗಲೂ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದನು. ಮುಂದೆ ದುಶ್ಯಾಸನನು ಸೇರಿದ ಸಭೆಯಲ್ಲಿ ದ್ರೌಪದಿಯನ್ನು ಅವಮಾನಿಸಲು ಪ್ರಯತ್ನಿಸಿದಾಗ ಶ್ರೀ ಕೃಷ್ಣನು ತನ್ನ ಮನಸ್ಸಿನ ಪ್ರತಿಜ್ಞೆಯಂತೆ ಸಹಾಯ ಮಾಡಿ ಅಕ್ಷಯ ವಸ್ತ್ರವನ್ನು ನೀಡಿದದ್ದನ್ನು ನಾವು ಗಮನಿಸಬಹುದು.

ಹಾಗಾಗಿ ಈ ರಕ್ಷಾಬಂಧನವೆಂಬುದು ಕೇವಲ ಹಬ್ಬವಾಗದೆ ಯುಗಯುಗಗಳಿಂದ ಬಂದಿರುವ ಪ್ರೀತಿಯ ಮತ್ತು ಜವಾಬ್ದಾರಿಯ ಹಬ್ಬವಾಗಿದೆ. ಸನಾತನ ಸಂಸ್ಕೃತಿಯಲ್ಲಿ ವಸುದೈವ ಕುಟುಂಬಕಂ ಎಂಬ ತತ್ವದ ಮೇಲೆ ನಿಂತಿರುವಂತಹದ್ದು. ಎಲ್ಲರೂ ಒಂದೇ ಕುಟುಂಬದವರು ಎನ್ನುವ ಭಾವನೆ ಎಲ್ಲಾ ಹಿಂದೂ ಬಂಧುಗಳು ತನ್ನ ಮನದಲ್ಲಿ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿ ಬಂಧುವನ್ನು ತನ್ನ ಕುಟುಂಬದ ಸದಸ್ಯ, ನಾವು ಪರಸ್ಪರ ಕಾಪಾಡುವ ಬದ್ಧತೆಯನ್ನು ಬೆಳೆಸಿಕೊಂಡು ಸಮಾಜದಲ್ಲಿ ವಿಶ್ವಾಸ ಮತ್ತು ಸಹಕಾರದೊಂದಿಗೆ ಸ್ವಸ್ಥ ಮತ್ತು ಸದೃಢ ಸಮಾಜ ಕಟ್ಟುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕಾಗಿದೆ.

ನಾವು ಒಬ್ಬರಿಗಾಗಿ ಜೊತೆಯಾಗುತ್ತೇವೆ ಅಥವಾ ನಿಲ್ಲುತ್ತೇವೆ ಎಂಬ ಸಂಕಲ್ಪದೊಂದಿಗೆ, ಸಾಮಾಜಿಕ ಅಡೆತಡೆಗಳ ನಿವಾರಣೆಗೆ ಈ ರಕ್ಷಾಬಂಧನ ಸಾಕ್ಷಿ ಆಗಬೇಕಿದೆ. ರಕ್ಷಾ ಬಂಧನವೂ ಪ್ರತಿಯೊಬ್ಬನೊಂದಿಗೆ ಪರಸ್ಪರ ವಿಶ್ವಾಸ, ಗೌರವನ್ನು ಭದ್ರಗೊಳಿಸಿ, ನಾನು ಆ ಜಾತಿ – ಈ ಜಾತಿ ಎಂಬ ಮನೋಭಾವವನ್ನು ತೊಲಗಿಸಿ, ಜಾತಿ ಮೀರಿ ನಾವು ಹಿಂದುಗಳು ಎನ್ನುವ ಒಗ್ಗಟ್ಟಿನ ಸಂದೇಶದೊಂದಿಗೆ ರಾಷ್ಟ್ರ ಸಾಮರಸ್ಯದ ಭಾವನೆಯನ್ನು ಗಟ್ಟಿಯಾಗಿಸಿ ನಮ್ಮ ಸಂಸ್ಕೃತಿಯ ಆಚರಣೆಗಳು ಜಗತ್ತಿಗೆ ಮಾದರಿಯಾಗಲಿ.

LEAVE A REPLY

Please enter your comment!
Please enter your name here