
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿ ಯ ಪಾಂಗಲ ಕ್ರಾಸ್ ಎಂಬಲ್ಲಿ ದಿನಾಂಕ 06.08.2025ರಂದು ನಡೆದ ಅಹಿತಕರ ಘಟಣೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ.

ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು – 4
- ಪ್ರಕರಣದ ಪಿರ್ಯಾದಿದಾರರಾದ ಬಂಟ್ವಾಳ ನಿವಾಸಿ ಅಜಯ್ ಎಂಬವರ ದೂರಿನಂತೆ, ಸದ್ರಿಯವರು ಕುಡ್ಲ ರಾಂಪೇಜ್ ಎಂಬ ಯುಟ್ಯೂಬ್ ಚಾನೆಲ್ ನ ಮಾಲಕರಾಗಿದ್ದು, ದಿನಾಂಕ 06.08.2025 ರಂದು ಸಂಜೆ, ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ವ್ಯಕ್ತಿಯೊರ್ವರೊಂದಿಗೆ ವಿಡಿಯೊ ಬೈಟ್ ಮಾಡುತ್ತಿದ್ದಾಗ, ಸದ್ರಿ ಸ್ಥಳಕ್ಕೆ ಸುಮಾರು 15 ರಿಂದ 50 ಜನರ ಕಿಡಿಗೇಡಿಗಳ ಗುಂಪು ಬಂದು, ಪಿರ್ಯಾದಿರವರಿಗೆ, ಕ್ಯಾಮರ ಮ್ಯಾನ್ ಸುಹಾಸ್, ಸಂಚಾರಿ ಸ್ಟುಡಿಯೋ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾ ಅಭಿಷೇಕ್ ಎಂಬವರುಗಳಿಗೆ ಹಲ್ಲೆ ನಡೆಸಿ, ಪಿರ್ಯಾದಿರವರ ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿ, ಅದರಲ್ಲಿದ್ದ ಮೆಮೊರಿ ಕಾರ್ಡ್ ಕಳವು ಮಾಡಿ, ಬಳಿಕ ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಬಗ್ಗೆ ಅ.ಕ್ರ: 46/2025 ಕಲಂ: 189(2), 191(2), 115(2), 324(5) , 352, 307 ಜೊತೆಗೆ 190 ಬಿ.ಎನ್.ಎಸ್- 2023 ರಂತೆ ಪ್ರಕರಣದ ದಾಖಲಾಗಿರುತ್ತದೆ.
- ದಿನಾಂಕ: 06.08.2025 ರಂದು ಸಂಜೆ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್ ಎಂಬಲ್ಲಿ, ಸುಮಾರು 25 ರಿಂದ 50 ಜನರು, ಎರಡು ಪ್ರತ್ಯೇಕ ಗುಂಪುಗಳಾಗಿ ಅಪರಾಧಿಕ ಕೃತ್ಯ ನಡೆಸಲು ಅಕ್ರಮ ಕೂಟ ಸೇರಿದ್ದು, ಈ ವೇಳೆ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆಗೆ ನಡೆಸದೇ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿ, ಸೇರಿದ್ದ ಗುಂಪುಗಳು ಪರಸ್ಪರ ಗಲಾಟೆ ನಡೆಸಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 47/2025 ಕಲಂ: 189(2), 191(2), 132, 324(6) ಜೊತೆಗೆ 190 ಬಿ ಎನ್ ಎಸ್ ರಂತೆ ಸುಮೋಟೊ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ದಿನಾಂಕ: 06.08.2025 ರಂದು ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ, ಸುಮಾರು 50-100 ಮಂದಿ, ಧರ್ಮಸ್ಥಳ ಠಾಣಾ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿರುತ್ತಾರೆ. ಅವರುಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2025 ಕಲಂ: 189(2) ಜೊತೆಗೆ 190 ಬಿಎನ್ ಎಸ್ ರಂತೆ ಸುಮೋಟೊ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ದಿನಾಂಕ: 06.08.2025 ರಂದು ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ಯೂಟ್ಯೂಬರ್ಸ್‌ಗಳಿಗೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸದ್ರಿ ಸ್ಥಳಕ್ಕೆ ಬಂದ ಪಿರ್ಯಾದಿದಾರರಾದ ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ (42) ಎಂಬವರಿಗೆ, ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿರುತ್ತಾರೆ. ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಕ್ಕೆ ಹಾನಿಗೊಳಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2025 ಕಲಂ: 189(2), 191(2), 115(2), 110, 324(3), 352, 351(2) ಜೊತೆಗೆ 190 ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು – 3
- ಪ್ರಕರಣದ ಪಿರ್ಯಾದಿದಾರರಾದ ಬೆಂಗಳೂರು ನಿವಾಸಿ ಹರೀಶ್ ಆರ್ (34) ಎಂಬವರ ದೂರಿನಂತೆ, ಸದ್ರಿಯವರು ಏಷಿಯನೆಟ್ ಸುವರ್ಣ ಎಂಬ ಖಾಸಗಿ ಚಾನೇಲ್ ನ ಕ್ರೈಂ ರಿಪೋರ್ಟರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ: .06.08.2025 ರಂದು ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆ ಬೆನಕ ಆಸ್ಪತ್ರೆಯ ಬಳಿ ತೆರಳಿರುತ್ತಾರೆ. ಈ ವೇಳೆ ಸದ್ರಿ ಸ್ಥಳದಲ್ಲಿದ್ದ ಗಿರೀಶ್ ಮಟ್ಟಣ್ಣನವರ್ ಎಂಬವರೊಂದಿಗೆ ವಿಡಿಯೋ ಬೈಟ್ ಕೊಡುವಂತೆ ಕೇಳಿದಾಗ, ಆರೋಪಿತರು ಏಕಾಏಕಿ ಬೈದಿರುತ್ತಾರೆ. ಸ್ಥಳದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರೊಂದಿಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿರುತ್ತಾರೆ. ಆ ವೇಳೆ ಸ್ಥಳಕ್ಕೆ ಬಂದ ಮತ್ತೋರ್ವ ಆರೋಪಿ ಸಮೀರ್ ಯೂಟ್ಯೂಬರ್ಸ್ ಎಂಬಾತನು ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 75/2025 ಕಲಂ: 189(2), 191(1) (2), 115(2), 351(2), 352 ಜೊತೆಗೆ 190 ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
- ಪ್ರಕರಣದ ಪಿರ್ಯಾದಿದಾರರಾದ ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ (28) ಎಂಬವರ ದೂರಿನಂತೆ, ಸದ್ರಿಯವರು ದಿನಾಂಕ: 06.08.2025 ರಂದು ಧರ್ಮಸ್ಥಳದ ಪಾಂಗಳ ಎಂಬಲ್ಲಿ ಹಲ್ಲೆಗೊಳಗಾದವರನ್ನು ಚಿಕಿತ್ಸೆಗಾಗಿ ಉಜಿರೆ ಬೆನಕಾ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದು, ಗಾಯಾಳುಗಳನ್ನು ನೋಡಲು ಬಂದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ರವರನ್ನು ಬೈಟ್ ಕೊಡುವಂತೆ ಆರೊಪಿತ ಸುವರ್ಣ ನ್ಯೂಸ್ ನ ವರದಿಗಾರ ಹಾಗೂ ಕ್ಯಾಮರಾಮೆನ್ ತಡೆದು ನಿಲ್ಲಿಸಿರುತ್ತಾರೆ. ಸದ್ರಿಯವರು ಬೈಟ್ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ತಳ್ಳಾಟ ನಡೆಸಿರುತ್ತಾರೆ. ಈ ಘಟನೆ ನಡೆದು ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಎನ್ನುವ ನ್ಯೂಸ್ ಆಂಕರ್ , “ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ” ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 76/2025 ಕಲಂ:126(2), 296, 351 ಜೊತೆಗೆ 3(5) ಬಿಎನ್ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
- ದಿನಾಂಕ: 06-08-2025 ರಂದು ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಬೆಳ್ತಂಗಡಿ ಉಜಿರೆ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಜಮಾವಣೆಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಸದ್ರಿ ಸ್ಥಳದಲ್ಲಿ ಸುಮಾರು 50 ರಿಂದ 100 ಜನರು ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ, ಘೋಷಣೆಗಳನ್ನು ಕೂಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಸದಂತೆ ಹಾಗೂ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೂರ್ವಾನುಮತಿ ಪಡೆಯದೇ ಅಕ್ರಮಕೂಟ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ: 77/2025 ಕಲಂ:Sec 189(2)r/ w 190 BNS ಬಿಎನ್ಎಸ್ -2023 ರಂತೆ ಸುಮೋಟೊ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ದಾಖಲಾಗಿದೆ.