
ಉಜಿರೆ: ಇಲ್ಲಿನ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಸವರ್ಣ ನ್ಯೂಸ್ ವರದಿಗಾರ ಮತ್ತು ಕ್ಯಾಮರಾಮನ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಣೇಶ್ ಶೆಟ್ಟಿ ಎಂಬವರು ಸುವರ್ಣ ನ್ಯೂಸ್ ನಿರೂಪಕ ಅಜಿತ್ ಹನುಮಕ್ಕನವರ್, ವರದಿಗಾರ ಮತ್ತು ಕ್ಯಾಮರಾಮನ್ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ?: ಆಗಸ್ಟ್ 6ರಂದು ಸಂಜೆ ಪಾಂಗಾಳದಲ್ಲಿ ಯೂ ಟ್ಯೂಬರ್ಸ್ ಮೇಲೆ ದಾಳಿ ನಡೆದ ನಂತರ ಗಾಯಾಳುಗಳನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ರಾತ್ರಿ 7.30ರ ಸುಮಾರಿಗೆ ಗಾಯಾಳುಗಳನ್ನು ವಿಚಾರಿಸಿಕೊಳ್ಳಲು ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಆಗಮಿಸಿದಾಗ ಸುವರ್ಣ ನ್ಯೂಸ್ ವರದಿಗಾರ,ಕ್ಯಾಮರಾಮನ್ ಬೈಟ್ ಕೊಡಿ ಎಂದು ಕೇಳಿದಾಗ, ಅವರಿಗೆ ಗಿರೀಶ್ ಮಟ್ಟಣ್ಣನವರ್ ಸುವರ್ಣ ನ್ಯೂಸ್ ಅಜಿತ್ ರವರು ಸುಳ್ಳು ನ್ಯೂಸ್ ಪ್ರಸಾರ ಮಾಡುತ್ತಾರೆ. ಇಲ್ಲಿ ಯಾವುದೇ ಬೈಟ್ ಬೇಡ,ದಯವಿಟ್ಟು ಇಲ್ಲಿಂದ ಹೊರಡಿ ಎಂದು ವಿನಂತಿಸಿಕೊಂಡರು. ಆವಾಗ ಕ್ಯಾಮರಾಮನ್ ಮತ್ತು ವರದಿಗಾರ ಆಸ್ಪತ್ರೆಗೆ ನುಗ್ಗಲು ಪ್ರಯತ್ನಿಸಿದರು.ನಂತರ ಅವಾಚ್ಯವಾಗಿ ನಿಂದಿಸಿದರು. ಇದಾದ ನಂತರ ತಳ್ಳಾಟ ನೂಕಾಟ ನಡೆದಾಗ ತಿಮರೋಡಿ ಮತ್ತು ಮಟ್ಟಣ್ಣನವರ್ ಚಾನೆಲ್ ನವರನ್ನು ಆಸ್ಪತ್ರೆಯ ಒಳಭಾಗದಲ್ಲಿ ಕೂರಿಸಿದರು. ಈ ವೇಳೆ ವರದಿಗಾರ ಆವೇಶದಿಂದ ಕರೆ ಮಾಡಿ ನ್ಯೂಸ್ ಮಾಡುತ್ತೇವೆ ಅನ್ನುವಾಗ,ಸುವರ್ಣ ನ್ಯೂಸ್ ನಲ್ಲಿ ಆಂಕರ್ ಅಜಿತ್ ಹನುಮಕ್ಕನವರ್ ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ತಿಮರೋಡಿಯಿಂದ ಹಲ್ಲೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡಲು ಆರಂಭಿಸಿದರು. ಈ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆಂಕರ್ ಮತ್ತು ಅವಾಚ್ಯವಾಗಿ ನಿಂದಿಸಿದ ವರದಿಗಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿಕೆ ಎಂದು ಗಣೇಶ್ ಶೆಟ್ಟಿ ದೂರಿನಲ್ಲಿ ನಮೂದಿಸಿದ್ದಾರೆ.
ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಆರಂಭಿಸಿದ್ದಾರೆ.