
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದೆ. ಬಳಿಕ ೨೦ ಅಧಿಕಾರಿಗಳನ್ನು ಈ ತಂಡಕ್ಕೆ ನೇಮಕ ಮಾಡಲಾಗಿದೆ. ಶೀಘ್ರದಲ್ಲಿಯೇ ಎಸ್‌ಐಟಿ ತಂಡ ತನಿಖೆ ಆರಂಭಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹಲವಾರು ಮೃತದೇಹಗಳನ್ನು ನನಗೆ ನಿರಂತರವಾಗಿ ಬೆದರಿಸಿ ಹೂತು ಹಾಕಿಸಲಾಗಿದೆ ಹಾಗೂ ಬೆದರಿಸಿ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಪೊಲೀಸ್ ಇಲಾಖೆಗೆ ದೂರು ನೀಡಿದ ಬಳಿಕ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ನಂತರ ಈ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಜು. ೧೪ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಅಲ್ಲದೆ ಅನಾಮಿಕ ವ್ಯಕ್ತಿ ಮಾಡಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ದೇಶಾದ್ಯಂತ ವಕೀಲರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಚಿಂತಕರು, ರಾಜಕೀಯ ನಾಯಕರು ಸೇರಿದಂತೆ ಹಲವರು ಒತ್ತಾಯಿಸಿದ್ದರು. ಈ ವಿಚಾರ ಪತ್ರಿಕೆ, ಟಿ.ವಿ. ಮತ್ತು ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಜೊತೆ ಸಮಾಲೋಚನೆ ನಡೆಸಿ ಆರೋಪಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆಗೆ ನಿರ್ಧರಿಸಿದ್ದರು. ಅದರಂತೆ ಜು.೧೯ರಂದು ಗೃಹ ಇಲಾಖೆ ಎಸ್‌ಐಟಿ ರಚಿಸಿ ಆದೇಶಿಸಿದೆ. ಅಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು ಸದಸ್ಯರಾಗಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರಸ್ಥಾನದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ನೇಮಿಸಲಾಗಿದೆ. ವಿಶೇಷ ತನಿಖಾ ತಂಡ ರಚಿಸಿರುವುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ.ಪಾರ್ಶ್ವನಾಥ ಜೈನ್, ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ, ಸಿಪಿಐಎಂ ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ. ಎಸ್‌ಐಟಿಗೆ ತನಿಖೆ ವಹಿಸಿರುವುದನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಜೊತೆಗೆ ತನಿಖೆ ಹೆಸರಿನಲ್ಲಿ ಪವಿತ್ರ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಧಕ್ಕೆ ತರದಂತೆ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಸಾಕ್ಷಿ ದೂರುದಾರ ತನಗೆ ಸೂಕ್ತ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸಹಿತ ಹಲವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಎಸ್‌ಐಟಿ ರಚನೆ-ತನಿಖೆ ನಡೆಸಲು ನಿರ್ದೇಶನ: ಧರ್ಮಸ್ಥಳ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಗೀಡಾದ ಮೃತದೇಹಗಳನ್ನು ತನಗೆ ನಿರಂತರವಾಗಿ ಬೆದರಿಕೆಯೊಡ್ಡಿ ಹೂತು ಹಾಕಿಸಲಾಗಿದೆ ಮತ್ತು ಸಾಕ್ಷ್ಯ ನಾಶ ಮಾಡಿಸಲಾಗಿದೆ. ಈ ಪಾಪಕೃತ್ಯದಿಂದ ಪಶ್ಚಾತ್ತಾಪಕ್ಕೆ ಒಳಗಾಗಿ ತಾನು ಇದೀಗ ದೂರು ನೀಡುತ್ತಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಆರ್. ದೇಶಪಾಂಡೆ ಅವರ ಮೂಲಕ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.೩ರಂದು ಭಾರತೀಯ ನ್ಯಾಯ ಸಂಹಿತೆಯ ಕಲಂ ೨೧೧ (ಎ) ಅಡಿಯಲ್ಲಿ ಕೇಸು ದಾಖಲಿಸಿದ್ದ ಅನಾಮಧೇಯ ವ್ಯಕ್ತಿ ಜು.೧೧ರಂದು ಸಂಪೂರ್ಣ ಮುಸುಕುಧಾರಿಯಾಗಿ ತನ್ನ ಕೈಯಲ್ಲಿದ್ದ ಬ್ಯಾಗ್‌ನಲ್ಲಿ ಮೃತದೇಹದ ಭಾಗಗಳನ್ನು ಹಿಡಿದುಕೊಂಡು ಬಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ ಬಳಿಕ ದೇಶಾದ್ಯಂತ ಸಂಚಲನ ಸೃಷ್ಠಿಸಿದ ಈ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ. ಅನಾಮಧೇಯ ವ್ಯಕ್ತಿಯೋರ್ವರಿಂದ ಆರೋಪ ಕೇಳಿಬಂದ ಪ್ರಕರಣಗಳೂ ಸೇರಿದಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ದಾಖಲಾಗಿರುವ ಮತ್ತು ದಾಖಲಾಗಬಹುದಾದ ಎಲ್ಲ ಅಪರಾಧ ಪ್ರಕರಣಗಳ ತನಿಖೆ ನಡೆಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಲಾಗಿದೆ. ಅರೋಪಗಳ ಕುರಿತಂತೆ ಈಗಾಗಲೇ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಪೊಲೀಸ್ ಮಹಾನಿರ್ದೇಶಕರು ತನಿಖಾ ತಂಡಕ್ಕೆ ವರ್ಗಾಯಿಸಿ ಅಗತ್ಯ ಇರುವ ಅಧಿಕಾರಿ, ಸಿಬ್ಬಂದಿಯನ್ನು ಒದಗಿಸಬೇಕು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಲಭ್ಯ ಇರುವ ಸಂಪನ್ಮೂಲಗಳನ್ನು ತನಿಖಾ ತಂಡ ಬಳಸಿಕೊಳ್ಳಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ತನಿಖೆಗೆ ಸಂಬಂಧಿಸಿದ ಪ್ರಗತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ ಆಗಿಂದಾಗ್ಗೆ ವರದಿ ಮಾಡಬೇಕು. ಅಲ್ಲದೆ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಆದಷ್ಟು ಬೇಗ ವರದಿಯನ್ನು ಪೊಲೀಸ್ ಮಹಾನಿರ್ದೇಶಕರ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಗೃಹ ಇಲಾಖೆ ನಿರ್ದೇಶನ ನೀಡಿದೆ.
ಮಹಿಳಾ ಆಯೋಗ ಪತ್ರ ಬರೆದಿತ್ತು-ವಕೀಲರು ಮನವಿ ಸಲ್ಲಿಸಿದ್ದರು: ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ನೀಡಿದ್ದ ಹೇಳಿಕೆ ಮತ್ತು ಮನುಷ್ಯರೊಬ್ಬರ ತಲೆ ಬುರುಡೆ ದೊರಕಿದ ವಿಚಾರ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ತಾಯಿಯ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ಉಲ್ಲೇಖಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಕಳೆದ ೨೦ ವರ್ಷಗಳಿಂದ ನಡೆದಿವೆ ಎನ್ನಲಾದ ಹಲವು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲಿನ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದೂ ಆಯೋಗದ ಅಧ್ಯಕ್ಷರು ಪತ್ರದಲ್ಲಿ ಆಗ್ರಹಿಸಿದ್ದರು. ಧರ್ಮಸ್ಥಳ ಪ್ರದೇಶದಲ್ಲಿ ನೂರಾರು ಅತ್ಯಾಚಾರ, ಹತ್ಯೆ ಮತ್ತು ಕಾಡಿನಲ್ಲಿ ಶವಗಳನ್ನು ಹೂಳಿರುವ ಆರೋಪದ ತನಿಖೆಗೆ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಸಿ.ಎಸ್. ದ್ವಾರಕನಾಥ್, ಎಸ್. ಬಾಲನ್ ನೇತೃತ್ವದಲ್ಲಿ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಒಬ್ಬ ಸಾಕ್ಷಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿ ಕಳೇಬರದ ಮಾಹಿತಿಯನ್ನು ಸಲ್ಲಿಸಿದ್ದಾನೆ. ಜತೆಗೆ ನೂರಾರು ಶವಗಳು ಇರುವ ಸ್ಥಳವನ್ನು ತೋರಿಸುತ್ತೇನೆ ಎಂದಿದ್ದಾನೆ. ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವಷ್ಟೇ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಶವಗಳನ್ನು ಹುಡುಕಿ ಹೊರತೆಗೆಯುವ ಕೆಲಸ ಇನ್ನೂ ಆರಂಭವಾಗಿಲ್ಲ. ಈ ಗಂಭೀರ ವಿಷಯದತ್ತ ಗಮನ ಹರಿಸಬೇಕು ಎಂದೂ ಅವರು ಕೋರಿದ್ದರು.
ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಆಗ್ರಹ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಅವರು ಪ್ರಕರಣದಲ್ಲಿ ಫಿರ್ಯಾದುದಾರ ಸಾಕ್ಷಿಗೆ ರಾಜ್ಯ ಸರ್ಕಾರ ತಕ್ಷಣವೇ ಭದ್ರತೆ ಒದಗಿಸಬೇಕು. ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಒತ್ತಾಯಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವೂ ತನಿಖೆ ಸರಿಯಾಗಿ ಆಗುತ್ತಿಲ್ಲ. ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಫಿರ್ಯಾದುದಾರ ಸಾಕ್ಷಿಯ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಆಯ್ದ ಮಾಧ್ಯಮಗಳಿಗೆ ಸೋರಿಕೆಯಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು. ಇದರೊಂದಿಗೆ ತನಿಖೆ ವಿಳಂಬ ಆಗುತ್ತಿರುವುದರಿಂದ ಸಾಕ್ಷಿ ನಾಶವಾಗುವ ಸಾಧ್ಯತೆಗಳಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು. ಈ ವಿಚಾರಗಳು ಸ್ಥಳೀಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ವಾಹಿನಿಗಳಲ್ಲಿಯೂ ಸುದ್ದಿಯಾಗಿತ್ತು. ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಶೇಷ ತನಿಖಾ ತಂಡ ರಚಿಸಲು ನಿರಾಕರಿಸಿದ್ದರು. ಆದರೆ ವ್ಯಾಪಕ ಒತ್ತಡ ಉಂಟಾಗಿದ್ದರಿಂದ ಎಸ್‌ಐಟಿ ರಚಿಸಿ ಆದೇಶ ನೀಡಲಾಗಿದೆ.
ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ-ಸಿ.ಎಂ. ಸಿದ್ದರಾಮಯ್ಯ: ಎಸ್‌ಐಟಿ ರಚನೆ ಬಳಿಕ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದೆ. ಈ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆಯೋಗದ ಕೋರಿಕೆ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ನಡೆಸಿ ವರದಿ ನೀಡಲಿದೆ ಎಂದು ತಿಳಿಸಿದ್ದಾರೆ.
ಹರ್ಷೇಂದ್ರ ಕುಮಾರ್ ಅರ್ಜಿ ಪುರಸ್ಕರಿಸಿದ ಕೋರ್ಟ್
ಮಾನಹಾನಿ ವರದಿ ಪ್ರಕಟಿಸದಂತೆ ತಡೆಯಾಜ್ಞೆ
ಧರ್ಮಸ್ಥಳದಲ್ಲಿ ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಬಗ್ಗೆ ಮಾನಹಾನಿ ವರದಿಗಳನ್ನು ಪ್ರಕಟಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಧರ್ಮಸ್ಥಳದ ಡಿ. ಹಷೇಂದ್ರ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ಕುರಿತು ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮತ್ತು ಅವಹೇಳನಕಾರಿ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಯೂಟ್ಯೂಬರ್ ಎಂ.ಡಿ. ಸಮೀರ್ ಮತ್ತು ಮಾಧ್ಯಮದವರಿಗೆ ನಿರ್ದೇಶಿಸಿ ನಿಬಂಧಕಾಜ್ಞೆ ಹೊರಡಿಸಬೇಕು ಎಂದು ಕೋರಿ ಡಿ.ಹಷೇಂದ್ರ ಕುಮಾರ್ ಅವರು ದಾವೆ ದಾಖಲಿಸಿದ್ದರು. ಈ ದಾವೆಯನ್ನು ಪುರಸ್ಕರಿಸಿರುವ ನ್ಯಾಯಾಧೀಶರು ಮಾನಹಾನಿ ವರದಿ ಪ್ರಕಟಿಸದಂತೆ ಮತ್ತು ಈಗಾಗಲೇ ಪ್ರಕಟಿಸಿರುವುದನ್ನು ಅಳಿಸಿ ಹಾಕುವಂತೆ ಆದೇಶಿಸಿದ್ದಾರೆ.
ಎಸ್.ಐ.ಟಿ.ಗೆ ಹಸ್ತಾಂತರಿಸಿರುವುದು ಉತ್ತಮ
-ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ. ಪಾರ್ಶ್ವನಾಥ ಜೈನ್
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತಿzನೆ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದು ಮತ್ತು ಸರ್ಕಾರ ಆ ತನಿಖೆಯನ್ನು ಎಸ್‌ಐಟಿಗೆ ನೀಡಿರುವುದು ಉತ್ತಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ.ಪಾರ್ಶ್ವನಾಥ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್‌ಐಟಿ ತನಿಖೆಯಿಂದ ಸತ್ಯಾಂಶ ಹೊರ ಬರಲಿ ಎಂದು ಅವರು ತಿಳಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಹಲವಾರು ಶವಗಳನ್ನು ಹೂತಿದ್ದೆ ಎಂಬ ದೂರು ಪ್ರಕರಣ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟು ಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ.)ಕ್ಕೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು ತಿಳಿದು ಬಂದಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ. ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ‘ಸತ್ಯ’ ಆದ್ದರಿಂದ ಈ ಪ್ರಕರಣದಲ್ಲಿ ಎಸ್.ಐ.ಟಿ. ತನಿಖಾ ತಂಡ ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ಕೆ. ಪಾರ್ಶ್ವನಾಥ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦ ಅಧಿಕಾರಿಗಳ ನೇಮಕ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಸಮಗ್ರ ತನಿಖೆಗಾಗಿ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಮತ್ತೆ ೨೦ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಂಗಳೂರು ಡಿಸಿಅರ್‌ಇಯ ಎಸ್.ಪಿ. ಸೈಮನ್ ಸಿ.ಎ, ಉಡುಪಿ ಸಿಎಎನ್ ಠಾಣೆಯ ಡಿಎಸ್‌ಪಿ ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿಎಸ್‌ಪಿ ಮಂಜುನಾಥ್, ಸಿಎಸ್‌ಪಿ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಇ.ಸಿ ಸಂಪತ್, ಕೆ.ಕುಸುಮಾಧರ್, ಉತ್ತರ ಕನ್ನಡದ ಶಿರಸಿ ಗ್ರಾಮಾಂತರ ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಉಡುಪಿ, ಬೈಂದೂರು ಇನ್‌ಸ್ಪೆಕ್ಟರ್ ಪಿ.ಡಿ ಸವಿತ್ರತೇಜ್, ಸಿಎಸ್‌ಪಿ ಸಬ್‌ಇನ್‌ಸ್ಪೆಕ್ಟರ್‌ಗಳಾದ ಕೋಕಿಲ ನಾಯಕ್, ವೈಲೆಟ್ ಫೆಮಿನಾ, ಶಿವಶಂಕರ್, ಉತ್ತರ ಕನ್ನಡ ಶಿರಸಿ ಎನ್‌ಎಂ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಜಿಲ್ಲೆ ಅಂಕೋಲದ ಸಬ್‌ಇನ್‌ಸ್ಪೆಕ್ಟರ್ ಆರ್.ಸುಹಾಸ್, ಮುಂದುಗೋಡು ಸಬ್‌ಇನ್‌ಸ್ಪೆಕ್ಟರ್ ವಿನೋದ್ ಎಸ್. ಕಾಳಪ್ಪನವರ್, ಮಂಗಳೂರು ಸಬ್‌ಇನ್‌ಸ್ಪೆಕ್ಟರ್ ಜೆ.ಗುಣಪಾಲ್, ಉಡುಪಿ ನಗರ ಠಾಣೆಯ ಎಎಸ್‌ಐ ಸುಭಾಷ್ ಕಾಮತ್, ಉಡುಪಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಹರೀಶ್‌ಬಾಬು, ಉಡುಪಿ ಮಲ್ಪೆ ಸರ್ಕಲ್ ಕಚೇರಿಯ ಹೆಡ್‌ಕಾನ್‌ಸ್ಟೆಬಲ್ ಪ್ರಕಾಶ್, ಉಡುಪಿ ಕುಂದಾಪುರನಗರ ಠಾಣೆಯ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಫ್‌ಎಂಎಸ್ ಹೆಡ್‌ಕಾನ್‌ಸ್ಟೆಬಲ್ ದೇವರಾಜ್ ಅವರರು ನೇಮಕಗೊಂಡವರು.
ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ವಕೀಲರ ಪತ್ರ
ಧರ್ಮಸ್ಥಳ ಹಾಗೂ ಅದರ ಸುತ್ತಮುತ್ತ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳು ಮತ್ತು ಮೃತದೇಹಗಳ ವಿಲೇವಾರಿ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ವಕೀಲರು ಪತ್ರ ಬರೆದಿದ್ದಾರೆ. ವಕೀಲರಾದ ಶ್ರೀರಾಮ್ ಟಿ. ನಾಯಕ್, ಬಿ.ಎಸ್. ಗಣೇಶ್ ಪ್ರಸಾದ್, ವಿ. ಗಣೇಶ್ ಮತ್ತು ಕೆ.ಎ. ಪೊನ್ನಣ್ಣ ಅವರು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಜುಲೈ ೨೧ರಂದು ಪತ್ರ ಬರೆದಿದ್ದಾರೆ. ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ಈ ಪ್ರಕರಣ ಅತ್ಯಂತ ಆಘಾತಕಾರಿಯಾಗಿದೆ. ಜೂ. ೩ರಂದು ಪ್ರಕರಣ ದಾಖಲಾಗಿದ್ದು ೧೭ ದಿನ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಕರಣದ ಆರೋಪಿಗಳು ಅತ್ಯಂತ ಪ್ರಭಾವಿಗಳಾಗಿದ್ದಾರೆ. ತನಿಖೆಗೆ ಪೂರ್ವಾಗ್ರಹ ಉಂಟಾಗುತ್ತಿದ್ದು ನ್ಯಾಯಯುತ ತನಿಖೆಗಾಗಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಆರೋಪಿ ಯಾರು ಎಂಬುದನ್ನು ಈವರೆಗೆ ತನಿಖೆಯಿಂದ ಬಹಿರಂಗವಾಗಿಲ್ಲ. ಆದರೂ ರಾಜ್ಯದ ಎಲ್ಲ ರಾಜಕೀಯ ವ್ಯಕ್ತಿಗಳು ಕೆಲವು ಪ್ರಭಾವಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾದ ತತ್‌ಕ್ಷಣ ಪ್ರಭಾವಿಗಳ ಪರ ವ್ಯಕ್ತಿಯೊಬ್ಬರು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದು ತನಿಖೆ ಬಗ್ಗೆ ಸಂಶಯ ಮೂಡುವಂತಾಗಿದೆ. ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಥರ್ಡ್ ಐ ಅರ್ಜಿ ಅಂಗೀಕರಿಸಲು ನಕಾರ ಹೈಕೋರ್ಟ್‌ಗೆ ತೆರಳುವಂತೆ ಸುಪ್ರೀಂ ಸೂಚನೆ
ನವದೆಹಲಿ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶಂಕಿತ ಅಪರಾಧ ಪ್ರಕರಣಗಳ ಬಗ್ಗೆ ಮಾಧ್ಯಮಗಳು ವರದಿ ಮಾಡುವಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಬಾರದು ಎಂದು ಬೆಂಗಳೂರಿನ ಅಡಿಷನಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಹೊರಿಡಿಸಿದ್ದ ಪ್ರತಿಬಂಧಕಾಜ್ಞೆಯನ್ನು ಪ್ರಶ್ನಿಸಿ ‘ಥರ್ಡ್ ಐ’ ಎಂಬ ಯೂಟ್ಯೂಬ್ ಪೇಜ್‌ನ ಮಾಲೀಕ ಸುಬ್ರಹ್ಮಣ್ಯ ಹಂಡಿಗೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ್ದು, ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಸುಬ್ರಹ್ಮಣ್ಯ ಹಂಡಿಗೆ ಪರ ವಕೀಲರು ತಾವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿ, ಅರ್ಜಿಯಲ್ಲಿನ ಅಂಶಗಳ ಬಗ್ಗೆ ಗಮನಸೆಳೆದರು. ಆದರೆ, ಅರ್ಜಿ ವಿಚಾರಣೆಗೆ ನಿರಾಸಕ್ತಿ ತೋರಿದ ನ್ಯಾಯಪೀಠ, ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕು. ನೇರವಾಗಿ ಸುಪ್ರೀಂಕೋರ್ಟ್‌ಗೆ ಬರುವುದಲ್ಲ ಎಂದು ತಿಳಿಸಿತು.
ಡಾ. ಹೆಗ್ಗಡೆ ಅವರ ಸೋದರ ಮತ್ತು ಶ್ರೀ ಮಂಜುನಾಥಸ್ವಾಮಿ ದೇವಾಲಯ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇಂದ್ರ ಕುಮಾರ್ ಅವರು ಈ ಹಿಂದೆ ಸಲ್ಲಿಸಿದ ಮಾನನಷ ಮೊಕದ್ದಮೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪೊಲೀಸ್ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ನಮ್ಮ ಮೇಲೆ ಎಲ್ಲೂ ನೇರ ಆರೋಪಗಳಿಲ್ಲದಿದ್ದರೂ, ಹಲವಾರು ಮಾಧ್ಯಮ, ಯೂಟ್ಯೂಬ್‌ಗಳಲ್ಲಿ ತಮ್ಮ ಮತ್ತು ದೇವಾಲಯಕ್ಕೆ ಸಂಬಂಧಿಸಿ ಮೇಲಧಿಕಾರಿಗಳನ್ನು ಶಂಕಿತ ಅಪರಾಧಗಳಿಗೆ ಲಿಂಕ್ ಮಾಡಿ, ಸುಳ್ಳು, ಮಾನಹಾನಿಕರ ವಿಚಾರಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಡಿ. ಹರ್ಷೇಂದ್ರ ಕುಮಾರ್ ಅರ್ಜಿಯಲ್ಲಿ ವಿವರಿಸಿದ್ದರು.
ಎಸ್.ಐ.ಟಿ. ತನಿಖೆ ನಡೆದು ಸತ್ಯಾಂಶ ಹೊರಬರಲಿ
ಧರ್ಮಸ್ಥಳ ಪಾವಿತ್ರ್ಯತೆಯ ಕ್ಷೇತ್ರ-ಕಪ್ಪು ಚುಕ್ಕೆ ತರುವುದು ಬೇಡ: ಖಾದರ್
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದ್ದು ತನಿಖೆ ಮೂಲಕ ಸತ್ಯಾಸತ್ಯತೆ ಬಯಲಾಗಲಿ. ಧರ್ಮಸ್ಥಳ ಪಾವಿತ್ರ್ಯತೆಯ ಕ್ಷೇತ್ರ. ಅಲ್ಲಿಗೆ ಕಪ್ಪು ಚುಕ್ಕೆ ತರುವುದು ಬೇಡ ಎಂದು ಹೇಳಿದ್ದಾರೆ.
ಜು.೨೧ರಂದು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾದರ್ ಅವರು ವ್ಯಕ್ತಿಯೊಬ್ಬರ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಸಮರ್ಪಕ ತನಿಖೆ ನಡೆದು ಸತ್ಯ ಸಂಗತಿ ಹೊರಬಂದು ಕಾನೂನು ಕ್ರಮ ಕೈಗೊಳ್ಳಲಿ.
ಆದರೆ ತನಿಖೆ ಪೂರ್ವದಲ್ಲೇ ಪೂರ್ವಾಗ್ರಹದ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಂದು ಪವಿತ್ರ ಕ್ಷೇತ್ರ ಕಟ್ಟಲು ಬಹಳಷ್ಟು ಶ್ರಮವಿದೆ.
ಆ ಸಂಸ್ಥೆಯಿಂದ ಹಲವರಿಗೆ ಪ್ರಯೋಜನವಾಗಿದೆ. ಇಲಾಖೆಯ ತನಿಖೆಗೆ ಎಲ್ಲರೂ ಸಹಕಾರ ಕೊಡಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅಷ್ಟರ ತನಕ ಸಮಾಧಾನದಿಂದ ಕಾಯೋಣ. ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು. ಕಪ್ಪು ಚುಕ್ಕೆ ತರುವುದು ಸರಿಯಲ್ಲ ಎಂದು ಹೇಳಿದರು.
ಗೃಹ ಸಚಿವರ ಭೇಟಿಯಾದ ಎಸ್‌ಐಟಿ ಚೀಫ್: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಬೆಂಗಳೂರಿನಲ್ಲಿ ಸೋಮವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಪರಮೇಶ್ವರ್ ಅವರನ್ನು ಭೇಟಿಯಾದ ಮೊಹಾಂತಿ ಅವರು ಪ್ರಕರಣದ ಸಂಬಂಧ ಅರ್ಧ ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಪ್ರಕರಣದ ವಿಚಾರವಾಗಿ ಹಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ.
ತನಿಖೆಯಿಂದ ಏನಾಗಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು. ಎಸ್‌ಐಟಿಯಿಂದ ಇಬ್ಬರು ಅಧಿಕಾರಿಗಳು ಹಿಂದೆ ಸರಿದಿದ್ದಾರೆ ಎಂದು ಕೇಳಿಬರುತ್ತಿರುವ ವದಂತಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು ತಂಡದಿಂದ ಯಾವ ತನಿಖಾಧಿಕಾರಿಗಳು ಹಿಂದೆ ಸರಿದಿಲ್ಲ. ಅವರೆಲ್ಲಾ ಜವಾಬ್ದಾರಿಯುತ ಅಧಿಕಾರಿಗಳು. ತನಿಖೆಗೆ ಸರಕಾರ ಆದೇಶ ಕೊಟ್ಟ ಬಳಿಕ ಅವರು ತಮ್ಮ ಕೆಲಸ ಮಾಡುತ್ತಾರೆ.
ತನಿಖೆಯಿಂದ ಹಿಂದೆ ಸರಿಯುತ್ತೇವೆ ಎಂದು ಯಾರೂ ನನ್ನ ಬಳಿ ಹೇಳಿಲ್ಲ. ಮಾಧ್ಯಮಗಳಲ್ಲಿ ಬಂದಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಅಪಘಾತದ ಮೂಲಕ ತಂದೆಯ ಕೊಲೆ: ಮಗನಿಂದ ದೂರು ಜಾಗದ ವಿವಾದದ ಹಿನ್ನಲೆಯಲ್ಲಿ ತನ್ನ ತಂದೆಯನ್ನು ವಾಹನ ಅಪಘಾತದ ಮೂಲಕ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಈ ಹಿಂದೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ತಾಲೂಕಿನ ಇತರೆಡೆಗಳಲ್ಲಿ ವಾಸವಾಗಿದ್ದು ಪ್ರಸ್ತುತ ಕೇರಳದಲ್ಲಿ ವಾಸವಾಗಿರುವ ಅನೀಶ್ ಜೋಯಿ ಎಂಬವರು ಕೇರಳದ ತಳಿಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿದ್ದು ಪೊಲೀಸರು ಇದರ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ವಾಸಿಸುತ್ತಿದ್ದ ವೇಳೆ ಅನೀಶ್ ಅವರ ತಂದೆ ಜೋಯ್ ಅವರು ೨೦೧೮ರ ಎಪ್ರಿಲ್ ೫ರಂದು ಮೂಡಬಿದ್ರೆ ಬೆಳುವಾಯಿ ಸಮೀಪ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.