
ಬೆಳ್ತಂಗಡಿ: ಮಾವೋವಾದಿ ಸಂಘಟನೆಯಲ್ಲಿ ತೊಡಗಿಸಿಕೊಂಡು ನಕ್ಸಲ್ ಚಟುವಟಿಕೆ ಮಾಡುತ್ತಿದ್ದ ಆರೋಪದಡಿ ಕೇಸ್‌ಗೆ ಒಳಗಾಗಿ ಕಳೆದ ಹತ್ತು ವರ್ಷಗಳಿಂದ ತ್ರಿಶೂರ್ ಜೈಲಿನಲ್ಲಿರುವ ಕೇರಳ ತ್ರಿಶೂರ್‌ನ ಪೆರಿಂಗೊಟ್ಟುಕರ ನಿವಾಸಿ ರೂಪೇಶ್ ಪಿ.ಆರ್. (೫೮ವ) ಎಂಬವರನ್ನು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಎಂಬಲ್ಲಿ ೨೦೧೨ರ ಡಿಸೆಂಬರ್ ೧೦ರಂದು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಬಾಡಿ ವಾರಂಟ್ ಮೂಲಕ ತಮ್ಮ ವಶಕ್ಕೆ ಪಡೆದುಕೊಂಡಿರುವ ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದ ಪೊಲೀಸರು ಜು.೨೨ರಂದು ಬೆಳ್ತಂಗಡಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೇಶ್ ಕೆ. ಅವರ ಎದುರು ಹಾಜರು ಪಡಿಸಿದ್ದಾರೆ. ಈ ವೇಳೆ ಹೆಚ್ಚಿನ ತನಿಖೆಗಾಗಿ ರೂಪೇಶ್ ಪಿ.ಆರ್.ಅವರನ್ನು ಮೂರು ದಿನ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ತನಿಖಾಧಿಕಾರಿ ವಿಜಯಪ್ರಸಾದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ. ತಮ್ಮ ಕಸ್ಟಡಿಯಲ್ಲಿರುವ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಅಂದು ನಡೆದ ಘಟನೆಯ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
೩ ದಿನ ಪೊಲೀಸ್ ಕಸ್ಟಡಿ:ಮಿತ್ತಬಾಗಿಲು ಗ್ರಾಮದ ಬೊಳ್ಳೆ ಎಂಬಲ್ಲಿ ೨೦೧೨ರ ಡಿಸೆಂಬರ್ ೧೦ರಂದು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ಮತ್ತು ಕಬಿನಿದಳದ ಮುಖ್ಯಸ್ಥೆ ಸಾವಿತ್ರಿಯವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿವಾರಂಟ್ ಮೂಲಕ ಎ.೭ರಂದು ವಶಕ್ಕೆ ಪಡೆದಿದ್ದ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ವಿಜಯಪ್ರಸಾದ್ ನೇತೃತ್ವದ ಪೊಲೀಸರು ಬೆಳ್ತಂಗಡಿಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶ ಸಂದೇಶ್ ಕೆ. ಅವರು ಹೆಚ್ಚಿನ ತನಿಖೆಗಾಗಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಿ.ಸಿ. ೬೨/೨೦೧೨ರಂತೆ ದಾಖಲಾಗಿರುವ ಕುಪ್ಪುಸ್ವಾಮಿ ವರ್ಸಸ್ ಸ್ಟೇಟ್ ಆಫ್ ವಕಿಂಗ್ ಕರ್ನಾಟಕ ಕೇಸ್‌ನಲ್ಲಿ ೩ರ/ಡಬ್ಲ್ಯು ಇಂಡಿಯನ್ ಆರ್ಮ್ಸ್ ಆಕ್ಟ್ ೧೪೩, ೧೪೭, ೧೪೮, ೧೨೧,(ಬಿ), ೩೦೭, ೩೩೩, ೧೪೯, ೧೬(೧), ಬಿ, ೧೮ ಎ, ೨೦ರಡಿ ದಾಖಲಾಗಿದ್ದ ಪ್ರಕರಣದಲ್ಲಿನ ವಿಚಾರಣೆಯ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರು ಈ ಘಟನೆ ನಡೆದಾಗ ನಮ್ಮ ಸಹವರ್ತಿ ರೂಪೇಶ್ ಪಿ.ಆರ್. ನಮ್ಮೊಂದಿಗೆ ಇದ್ದರು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರೂಪೇಶ್‌ರವರನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ತನಿಖೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಘಟನೆಯ ಹಿನ್ನೆಲೆ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರಾಗಿರುವ ಬಿ.ಜಿ.ಕೃಷ್ಣಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸದವರಾಗಿರುವ ಸಾವಿತ್ರಿ ಅವರನ್ನು ೨೦೧೨ರ ಡಿಸೆಂಬರ್ ೧೦ರಂದು ಮಿತ್ತಬಾಗಿಲು ಗ್ರಾಮದ ಬೊಳ್ಳೆ ಎಂಬಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತಮ್ಮ ಈ ಕೃತ್ಯದಲ್ಲಿ ನಕ್ಸಲ್ ರೂಪೇಶ್ ಕೂಡ ಇದ್ದ ಎಂದು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ರೂಪೇಶ್‌ನನ್ನು ವಶಕ್ಕೆ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿರುವವರು ಮಿತ್ತಬಾಗಿಲು ಗ್ರಾಮದ ಬೊಳ್ಳೆ ಎಂಬ ಪ್ರದೇಶದಲ್ಲಿ ಗುಂಪುಗೂಡಿ ನಕ್ಸಲ್ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅಂದು ಅಲ್ಲಿಗೆ ದಾಳಿ ನಡೆಸಿದಾಗ ನಕ್ಸಲರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ನಿವಾಸಿ ವಿಕ್ರಂ ಗೌಡ ಮತ್ತು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಅಲ್ಲಿಂದ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಮತ್ತು ಅಲ್ಲಿ ಉಳಿದಿದ್ದ ನಕ್ಸಲ್ ತಂಡದ ನಡುವೆ ನಡೆದ ದಾಳಿ ಪ್ರತಿ ದಾಳಿ ವೇಳೆ ಪೊಲೀಸ್ ಇಲಾಖೆಯ ಸದಾಶಿವ ಚೌಧರಿ ಅವರಿಗೆ ಗುಂಡೇಟು ತಗುಲಿತ್ತು.
ಈ ಪ್ರಕರಣದಲ್ಲಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ಸಾವಿತ್ರಿ ಮೂರನೇ ಆರೋಪಿಯಾಗಿದ್ದು ಬಿ.ಜಿ. ಕೃಷ್ಣಮೂರ್ತಿ ಐದನೇ ಆರೋಪಿಯಾಗಿದ್ದಾನೆ. ಒಂದನೇ ಆರೋಪಿ ಕುಪ್ಪು ಸ್ವಾಮಿ ಮೃತಪಟ್ಟಿದ್ದು ವಿಕ್ರಂ ಗೌಡ ಪೊಲೀಸರ ಎನ್‌ಕೌಂಟರ್‌ಗೆ ಇತ್ತೀಚೆಗೆ ಬಲಿಯಾಗಿದ್ದಾನೆ. ಸುಂದರಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಶರಣಾಗಿದ್ದು ಬೆಂಗಳೂರು ಜೈಲಿನಲ್ಲಿದ್ದಾಳೆ. ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನೂ ಆಗಿದ್ದ ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಕಾರ್ಯದರ್ಶಿಯೂ ಆಗಿದ್ದ ಬಿ.ಜಿ.ಕೃಷ್ಣಮೂರ್ತಿ(೫೦ ವ) ಮತ್ತು ಕಾರ್ಮಿಕರ ಪರ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದ ಸಾವಿತ್ರಿ(೪೦) ಅವರನ್ನು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದ ಪ್ರಕರಣದ ತನಿಖಾಧಿಕಾರಿಯಾಗಿರುವ ಬಂಟ್ವಾಳ ಡಿವೈಎಸ್‌ಪಿ ವಿಜಯ ಪ್ರಸಾದ್ ನೇತೃತ್ವದ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಎ.೭ರಂದು ಹಾಜರುಪಡಿಸಿದ್ದರು. ಈ ವೇಳೆ ಬಿ.ಜಿ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶ ಸಂದೇಶ್ ಅವರು ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಕರೆ ತರಲಾಗಿದ್ದ ನಕ್ಸಲರನ್ನು ಬೆಳ್ತಂಗಡಿ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದ ನಂತರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದರು. ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಘಟನೆಯ ಮಾಹಿತಿ ನೀಡಿದ್ದ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರು ಘಟನೆಯ ಸಮಯ ನಮ್ಮೊಂದಿಗೆ ರೂಪೇಶ್ ಇದ್ದ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೂಪೇಶ್‌ನನ್ನು ತ್ರಿಶೂರ್ ಜೈಲಿನಿಂದ ತಮ್ಮ ವಶಕ್ಕೆ ನೀಡಲು ಆದೇಶ ಮಾಡಬೇಕು ಎಂದು ಡಿವೈಎಸ್‌ಪಿ ವಿಜಯಪ್ರಸಾದ್ ಬಾಡಿ ವಾರಂಟ್ ಅರ್ಜಿ ಸಲ್ಲಿಸಿದ್ದರು.
೨೦೦೫ರಿಂದ ನಕ್ಸಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ಬಿ.ಜಿ. ಕೃಷ್ಣಮೂರ್ತಿ ಮತ್ತು ಕೇರಳ ವಯನಾಡಿನ ಕಬಿನಿದಳದ ಮುಖ್ಯಸ್ಥೆಯಾಗಿದ್ದ ಸಾವಿತ್ರಿಯವರನ್ನು ೨೦೨೧ರ ನವೆಂಬರ್ ೯ರಂದು ಬಂಧಿಸಿ ಕೇರಳದ ತ್ರಿಶೂರ್ ಜೈಲಿನಲ್ಲಿರಿಸಲಾಗಿತ್ತು. ಮಿತ್ತಬಾಗಿಲು ಗ್ರಾಮದ ಬೊಳ್ಳೆದಲ್ಲಿ ನಡೆದಿರುವ ಪೊಲೀಸರ ಮೇಲಿನ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುವ ಹಿನ್ನೆಲೆಯಲ್ಲಿ ಬಾಡಿ ವಾರಂಟ್ ಮೂಲಕ ತ್ರಿಶೂರ್ ಜೈಲಿನಿಂದ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ವಶಕ್ಕೆ ಪಡೆದ ಇಲ್ಲಿನ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ವಿಚಾರಣೆ ನಡೆಸಿದ್ದಾರೆ. ಬಿ.ಜಿ. ಕೃಷ್ಣಮೂರ್ತಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ೫೩ ಕೇಸು ಮತ್ತು ಸಾವಿತ್ರಿ ವಿರುದ್ಧ ೨೨ ಕೇಸ್ ದಾಖಲಾಗಿದೆ. ಕುತ್ಲೂರಿನಲ್ಲಿ ರಾಮಚಂದ್ರ ಭಟ್‌ರವರ ಕಾರಿಗೆ ಬೆಂಕಿ ಹಚ್ಚಿದ್ದ ಮತ್ತು ಕಾಯರ್ತಡ್ಕದಲ್ಲಿ ಗೋಡೆ ಬರಹ ಬರೆದ ಪ್ರಕರಣದಲ್ಲಿಯೂ ಬಂಧಿತರ ವಿಚಾರಣೆ ನಡೆದಿತ್ತು. ಏ.೯ರಂದು ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ತ್ರಿಶೂರ್ ಜೈಲಿಗೆ ಕಳುಹಿಸಲಾಗಿತ್ತು.
ಜೀವನ ಸಂಗಾತಿಯೊಂದಿಗೆ ಬಂಧನವಾಗಿದ್ದ ರೂಪೇಶ್: ೨೦೧೫ರಲ್ಲಿ ಕಾಮ್ರೆಡ್ ರೂಪೇಶ್ ಮತ್ತು ವಕೀಲರಾಗಿದ್ದ ಅವರ ಜೀವನ ಸಂಗಾತಿ ಸೈನಾ ಮತ್ತು ವೀರಮಣಿ ಅವರನ್ನು ಒಳಗೊಂಡ ಐದು ಜನರನ್ನು ಕೊಯಂಬತ್ತೂರಿನಲ್ಲಿ ಆಂದ್ರಪ್ರದೇಶದ ಪೊಲೀಸರ ಸೂಚನೆಯ ಮೇರೆಗೆ ತಮಿಳುನಾಡಿನ ಬ್ರಾಂಚ್ ಪೊಲೀಸರು ಬಂಧಿಸಿದ್ದರು. ರೂಪೇಶ್ ಮತ್ತು ವೀರಮಣಿ ವಿರುದ್ಧ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೇಸು ದಾಖಲಾಗಿತ್ತು. ರೂಪೇಶ್ ವಿರುದ್ಧ ೪೦ಕ್ಕೂ ಹೆಚ್ಚಿನ ಕೇಸು ದಾಖಲಾಗಿದ್ದು ಮಡಿಕೇರಿಯಲ್ಲಿ ದಾಖಲಾದ ಕೇಸುಗಳಲ್ಲಿ ಅವರು ತಾನೇ ವಾದ ಮಾಡಿ ದೋಷಮುಕ್ತರಾಗಿದ್ದರು. ಉಳಿದ ಕೇಸುಗಳಿಗೆ ಸಂಬಂಧಿಸಿ ಜಾಮೀನು ಪಡೆದು ಹೊರಬರುವ ವೇಳೆ ಕೇರಳದ ವೆಳ್ಳಮುಂಡದ ಕೇಸಿನಲ್ಲಿ ಅವರಿಗೆ ೧೦ ವರ್ಷ ಸೆರೆ ವಾಸ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗಿದ್ದು ಅವರು ಈಗಾಗಲೇ ೧೦ ವರ್ಷ ಜೈಲುವಾಸ ಅನುಭವಿಸಿದ್ದಾರೆ. ನ್ಯಾಯಾಲಯ ವಿಧಿಸಿದ ದಂಡವನ್ನೂ ಅವರು ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತನ್ನ ಮೇಲಿನ ಎಲ್ಲಾ ಕೇಸುಗಳಿಂದಲೂ ಹೊರಬರಲು ಸಿದ್ಧತೆ ಆಗುತ್ತಿರುವಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ೨೦೧೨ರ ಘಟನೆಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ.
ತಾನೇ ವಾದಿಸಿದ ರೂಪೇಶ್!: ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ ವೇಳೆ ನಕ್ಸಲ್ ರೂಪೇಶ್ ಅವರು ತನ್ನ ಪರ ವಾದಿಸಲು ವಕೀಲರನ್ನು ನೇಮಕ ಮಾಡುವ ಬದಲು ತಾನೇ ವಾದ ಮಂಡಿಸಿ ಗಮನ ಸೆಳೆದರು. ತನ್ನ ಮೇಲೆ ಇತರ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಾಗಲೂ ತಾನೇ ವಾದ ಮಂಡಿಸಿದ್ದ ವಕೀಲರೂ ಆಗಿರುವ ರೂಪೇಶ್ ಅವರು ಬೆಳ್ತಂಗಡಿ ನ್ಯಾಯಾಲಯದಲ್ಲಿಯೂ ವಾದ ಮಂಡಿಸಿದರು. ಕನ್ನಡ ಭಾಷೆಗೆ ಅನುವಾದ ಮಾಡಲು ಬೆಳ್ತಂಗಡಿಯ ವಕೀಲ ಶಿವಕುಮಾರ್ ಸಹಕಾರ ನೀಡಿದರು.
ಸುಳ್ಳು ಕೇಸ್-ರೂಪೇಶ್: ಸುಳ್ಳು ಕೇಸ್ ಹಾಕಿ ಒಬ್ಬರನ್ನು ಬಂಧಿಸುವುದು ಸಂವಿಧಾನಾತ್ಮಕವಲ್ಲ, ನನ್ನ ಮೇಲೆ ಹಾಕಿರುವುದು ಸುಳ್ಳು ಕೇಸ್. ಸಿದ್ದರಾಮಯ್ಯ ಅವರು ಬಾಡಿ ವಾರೆಂಟ್ ಬಗ್ಗೆ ನೆನಪಿಸಿಕೊಳ್ಳಬೇಕು ಎಂದು ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ರೂಪೇಶ್ ಪಿ.ಆರ್. ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.