
ಧರ್ಮಸ್ಥಳ: ಗ್ರಾಮದ ನಾರ್ಯ ಸಮೀಪದ ದೆಲಂಪಾಡಿ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಇನೋವಾ ಕಾರೊಂದು ಡಿಕ್ಕಿ ಹೊಡೆದ ಘಟನೆ ಜು.24ರಂದು ಬೆಳಗ್ಗೆ ನಡೆದಿದೆ.
ನೇತ್ರಾವತಿಯಿಂದ- ಬೆಳಾಲು ಕಡೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಮುಳ್ಳಿನ ಗಿಡ, ಬಳ್ಳಿಯಂತಹ ಗಿಡ ಬೆಳೆದಿರುವುದರಿಂದ ತಿರುವುಗಳಲ್ಲಿ ಎದುರಿಗೆ ಬರುವಂತಹ ವಾಹನಗಳು ತಿಳಿಯದೆ ಅಪಘಾತಗಳು ಈ ಪ್ರದೇಶದಲ್ಲಿ ಸಂಭವಿಸುತ್ತಿವೆ.
ನೇತ್ರಾವತಿಯಿಂದ ನಾರ್ಯ ಕಡೆಗೆ ಬರುತ್ತಿದ್ದ ಕಾರಿನ ಚಾಲಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕಿನ ಅಪಘಾತವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬವು ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬ ಸಂಪೂರ್ಣ ಹಾನಿಯಾಗಿದೆ. ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಇಲಾಖೆಯ ಬಸಪ್ಪ ಅವರು ಭೇಟಿ ನೀಡಿದ್ದಾರೆ.

ಈ ಭಾಗದ ಜನರಿಗೆ ಆಟಿ ಅಮವಾಸ್ಯೆ ದಿನದಂದೇ ಬೆಳ್ಳಂಬೆಳಗ್ಗೆ ವಿದ್ಯುತ್ ಇಲ್ಲದಂತಾಗಿದೆ. ಈ ಬಾರಿ ಚೆನ್ನಾಗಿ ಮಳೆ ಬಂದಿರುವುದರಿಂದ ಕಳೆ ಗಿಡಗಳು ಹುಲುಸಾಗಿ ಬೆಳೆದಿವೆ. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ಅಳವಡಿಸಿರುವ ಸೂಚನಾ ಫಲಕ, ಎಚ್ಚರಿಕೆ ಫಲಕಗಳೆಲ್ಲ ಕಳೆ ಗಿಡಗಳಿಂದ ಆವರಿಸಿಕೊಂಡಿದೆ.
ವಿದ್ಯುತ್ ಕಂಬಗಳಲ್ಲಿ ದಾರಿದೀಪಗಳು ಇದ್ದರೂ ಅದು ಸರಿಪಡಿಸಿದ ಒಂದೆರಡು ದಿನಗಳು ಮಾತ್ರ ಉರಿಯುತ್ತದೆ. ಇದರಿಂದಾಗಿ ರಾತ್ರಿಯ ಸಮಯದಲ್ಲಿ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಬಸ್ ಅಥವಾ ಭಾರಿ ವಾಹನಗಳು ರಸ್ತೆಯಲ್ಲಿ ಬಂದರೆ ಸಣ್ಣ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನಗಳು ಬದಿಗೆ ಸರಿದರೆ ಕಳೆಗಿಡಗಳು ದೇಹಕ್ಕೆ ಬಡಿಯುತ್ತವೆ ಮತ್ತು ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾದಾಚಾರಿಗಳು ನಡೆದುಕೊಂಡು ಹೋಗುವಾಗ ಇಂತಹ ಸಮಸ್ಯೆ ಉಂಟಾಗುತ್ತಿದೆ.
ಇದರ ಬಗ್ಗೆ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಸುದ್ದಿಗೆ ತಿಳಿಸಿದ್ದಾರೆ. ಇದರ ಬಗ್ಗೆ ತಕ್ಷಣ ಸ್ಪಂದಿಸದೆ ಇದ್ದಲ್ಲಿ ಗ್ರಾಮ ಸಭೆಯನ್ನೇ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.