ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದುವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಎಸ್.ಪಿ. ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಮುಸುಕುಧಾರಿಯಾಗಿ ಹಾಜರಾದ ನಂತರ ಜುಲೈ 16ರಂದು ಸಮಾಧಿ ಅಗೆಯುವ ಕಾರ್ಯ ನಡೆಯಲಿದೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಮಾಧ್ಯಮದವರು ಎಸ್ ಪಿಯವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ” ಧರ್ಮಸ್ಥಳ ಅಕ್ರ: 39/2025 ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ 16.07.2025ರಂದು ಮಧ್ಯಾಹ್ನ 3 ಗಂಟೆಗೆ ಸಮಾಧಿ ಅಗೆಯುವ ಯಾವುದಾದರು ಪ್ರಕ್ರಿಯೆ ನಡೆಯಲಿದೆಯೇ ಎಂಬುದಾಗಿ ಕೆಲವು ಮಾಧ್ಯಮ ಪ್ರತಿನಿಧಿಗಳು ವಿಚಾರಿಸಿರುತ್ತಾರೆ. ಪೊಲೀಸ್ ಇಲಾಖೆಯಿಂದ ಅಂತಹ ಅಧಿಕೃತ ಪ್ರಕ್ರಿಯೆಗಳು ಇರುವುದಿಲ್ಲ ಎಂಬುದಾಗಿ ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ನೇತ್ರಾವತಿಯಲ್ಲಿ ಸಂಚಲನ ಸೃಷ್ಟಿಸಿದ ಬಿಳಿ ಕಾರು: ಎಸ್.ಪಿ. ಯವರ ಅಧಿಕೃತ ಮಾಹಿತಿಯ ನಂತರ ನೇತ್ರಾವತಿಯ ಸೇತುವೆ ಬಳಿ ನಿಂತ ಕಾರೊಂದು ಸಂಚಲನ ಮೂಡಿಸಿದ ಘಟನೆ ನಡೆದಿದೆ. ಸಾಕ್ಷಿ ದೂರುದಾರ ಮತ್ತು ವಕೀಲರು ಇರುವ ಕಾರು ಅಂತ ಹೇಳಲಾಗಿದ್ದು,ಅವರು ಅಲ್ಲಿಗೆ ಬಂದಿದ್ದೇ ಹೌದಾದರೆ ಯಾಕೆ ಎನ್ನುವುದು ಪ್ರಶ್ನೆಯಾಗಿದೆ.ಕೋರ್ಟ್ ನಿಂದಲೇ ರಕ್ಷಣೆ ಬಯಸಿದ್ದವರು, ಯಾವುದೇ ರಕ್ಷಣೆಯಿಲ್ಲದೇ ಬಂದಿದ್ದಾರಾ ಅನ್ನುವುದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ. ಕೆಲ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಪ್ರಕಟಿಸಿದ್ದು, ಕಾರು ಯಾರಿಗೆ ಸೇರಿದ್ದು, ಅದರೊಳಗಿದೆ ಇದ್ದಿದ್ಯಾರು ಅನ್ನುವುದು ಪ್ರಶ್ನಾರ್ಥಕವಾಗಿಯೇ ಇದೆ.