ಪಟ್ಟೂರು: ಹಿಂದೆ ಯಕ್ಷಗಾನವನ್ನು ಗಂಡು ಕಲೆ ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯಕ್ಷ ಧ್ರುವ ಯಕ್ಷ ಶಿಕ್ಷಣದಲ್ಲಿ ಸುಮಾರು ಆರೂವರೆ ಸಾವಿರ ವಿದ್ಯಾರ್ಥಿಗಳಿದ್ದು ಇದರಲ್ಲಿ ನಾಲ್ಕುವರೆ ಸಾವಿರ ವಿದ್ಯಾರ್ಥಿಗಳು ಹೆಣ್ಣು ಮಕ್ಕಳಾಗಿದ್ದಾರೆ ಎಂಬುದು ಹೆಮ್ಮೆ. ರಾಮ ಹೇಗಿದ್ದ ಕೃಷ್ಣ ಹೇಗಿದ್ದ ಎನ್ನುವುದನ್ನು ಓದಿ ತಿಳಿದುಕೊಳ್ಳುವುದಕ್ಕಿಂತ ವೇಷ ಧರಿಸಿ ಅಭಿನಯಿಸುವ ಮೂಲಕ ಅರಿತುಕೊಂಡರೆ ಹೆಚ್ಚು ಜ್ಞಾನ ಸಿಕ್ಕಂತಾಗುತ್ತದೆ. ಕಲಿಕೆಯ ಪ್ರಗತಿಗೆ ಬೇಕಾದ ನಾಲ್ಕು ಅಂಗಗಳಾದ ಕುಣಿತ, ಸಂಗೀತ, ವೇಷಭೂಷಣ, ಮಾತು ಯಕ್ಷಗಾನದಲ್ಲಿದೆ. ಹಾಗಾಗಿ ಇದು ಏಕಾಗ್ರತೆಗೆ ಸಹಕರಿಸುವುದರ ಜೊತೆಗೆ ನಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಏನನ್ನು ಬೇಕಾದರೂ ಸಾಧಿಸುತ್ತೇನೆ ಎನ್ನುವ ಛಲವನ್ನು ಯಕ್ಷಗಾನ ತಂದುಕೊಡುತ್ತದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ್ ನುಡಿದರು.

ಜು. 7ರಂದು ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಯಕ್ಷ ಧ್ರುವ ಯಕ್ಷ ಶಿಕ್ಷಣ ನಾಟ್ಯ ಅಭ್ಯಾಸವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ಧಿ ಭುಜಬಲಿ ಧರ್ಮಸ್ಥಳ ಮಾತನಾಡಿ, ಐತಾಳರ ಒತ್ತಾಯದಂತೆ ಹುಟ್ಟಿಕೊಂಡ ಈ ಯಕ್ಷ ಶಿಕ್ಷಣವು ಇಂದು ಬೆಳ್ತಂಗಡಿ ತಾಲೂಕಿನ 10 ಶಾಲೆಗಳಲ್ಲಿ ಶಿಕ್ಷಣ ನೀಡುತ್ತಿದೆ.
ಪಟ್ಲ ಫೌಂಡೇಶನ್ ನಿಂದ ಈಗಾಗಲೇ ಯಕ್ಷ ಶಿಕ್ಷಣದ ಜೊತೆ ಜೊತೆಗೆ ಬಡ ಕಲಾವಿದರಿಗೆ ಸಹಾಯ ಹಸ್ತವನ್ನು ನೀಡುತ್ತಾ ಬಂದಿದ್ದು ಕಲಾವಿದರಿಗೆ ವಿಮೆಯ ವ್ಯವಸ್ಥೆ, ಪಟ್ಲಾಶ್ರಯ ಯೋಜನೆಯನ್ನು ಹಮ್ಮಿಕೊಂಡು ಬರುತ್ತಿದೆ. ಈ ಶಾಲೆಯಲ್ಲಿ ಕಲಿತ ಯಕ್ಷಗಾನದ ಮಕ್ಕಳು ಮುಂದೆ ಆಕಾಶವಾಣಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವಂತಾಗಬೇಕು ಎಂದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ವಹಿಸಿದ್ದರು. ವೇದಿಕೆಯಲ್ಲಿ ಯಕ್ಷಗಾನ ಗುರು ಈಶ್ವರ ಪ್ರಸಾದ್ ನಿಡ್ಲೆ ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಧ್ರುವ ಯಕ್ಷ ಶಿಕ್ಷಣ ಪಠ್ಯ ಪುಸ್ತಕವನ್ನು ಫೌಂಡೇಶನ್ ವತಿಯಿಂದ ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕರು ಯಕ್ಷಗಾನ ಗುರುಗಳಿಗೆ ವೀಳ್ಯ ನೀಡಿ ಅಧಿಕೃತವಾಗಿ ನಾಟ್ಯಾಭ್ಯಾಸಕ್ಕೆ ಚಾಲನೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಗುರುಗಳು ವಿದ್ಯಾರ್ಥಿಗಳಿಗೆ ನಾಟ್ಯ ತರಗತಿಯನ್ನು ನಡೆಸಿಕೊಟ್ಟರು. ಶಾಲಾ ಯಕ್ಷಗಾನ ನಿಯೋಜಕಿ ಸ್ವಾತಿ ಕೆ.ವಿ. ಧನ್ಯವಾದವಿತ್ತರು.