ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುತ್ತದೆ.
ಜಲಪಾತ ಪ್ರದೇಶದ ಸುತ್ತಮುತ್ತ ತೀರಾ ಕಡಿದಾದ ಕಲ್ಲು ಬಂಡೆಗಳಿದ್ದು, ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದು, ಎಲ್ಲಾ ನದಿ ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಒಳ ಹರಿವು ಜಾಸ್ತಿ ಇರುವುದರಿಂದ ಪ್ರವಾಸಿಗರ ಚಾರಣಕ್ಕೆ ಅನಾನುಕೂಲ ಪರಿಸ್ಥಿತಿ ಉಂಟಾಗುತ್ತದೆ.
ಈ ನಿಟ್ಟಿನಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲು, ದಿಡುಪೆ, ಬೊಳ್ಳೆ ಮತ್ತು ಬಂಡಾಜೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂದರ್ಶನವನ್ನು ನಿಷೇಧಿಸುವುದು ಅವಶ್ಯವಾಗಿರುತ್ತದೆ.
ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಗಡಾಯಿಕಲ್ಲು, ದಿಡುಪೆ, ಬೊಳ್ಳೆ ಮತ್ತು ಬಂಡಾಜೆ ಜಲಪಾತಗಳಿಗೆ ಭೇಟಿ ನೀಡುವ ಪ್ರವಾಸಿಗರ ಭದ್ರತಾ ಹಿತದೃಷ್ಟಿಯಿಂದ ಪ್ರವಾಸಿಗರ ಸಂದರ್ಶನವನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಜೂ.16ರಂದು ಬೆಳ್ತಂಗಡಿ ವನ್ಯಜೀವಿ ಅರಣ್ಯಾಧಿಕಾರಿ ಸುದ್ದಿ ಬಿಡುಗಡೆಗೆ ತಿಳಿಸಿದ್ದಾರೆ.