ಉಜಿರೆ: ಸ್ವಾಭಾವಿಕ ಗೌರವವನ್ನು ತಂದು ಕೊಡುವ ನಡೆ-ನುಡಿಯಿಂದ ಮುಂದುವರೆದರೆ ವಿದ್ಯೆ ಸಾರ್ಥಕವಾಗುವುದು.
ವಿದ್ಯೆ ಆಯುಧವಿದ್ದಂತೆ ಆಯುಧ ಉತ್ತಮ ಚರಿತ್ರೆ, ಶೀಲದ ಮೂಲಕ ಜಗತ್ತಿನಲ್ಲಿ ಬಳಕೆ ಆಗೋದು ತುಂಬಾ ಅಗತ್ಯವಿದೆ.
ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಬಹಳ ಮುಖ್ಯ,ಸಂತೋಷದಿಂದ ಕೂಡಿದ ಸಮಾಜ ನಿರ್ಮಾಣದ ಅಗತ್ಯವಿದೆ ಅದನ್ನೇ ನಿಜವಾದ ಅಭಿವೃದ್ಧಿ ಎನ್ನಲಾಗುವುದು.
ಸನಾತನ ಧರ್ಮ ಬೋಧನೆ ಮೂಲಕ ಭಾರತೀಯರಿಗೆ ಸತ್ಯಾಸಂಧತೆ, ಶಿಸ್ತು, ಶೀಲ ನಿರ್ಮಾಣ, ಚರಿತ್ರೆ ನಿರ್ಮಾಣ, ಬುದ್ಧಿ ವಿಕಾಸಕ್ಕೆ ಒಳ ನೋಟವನ್ನು ತೆರೆದಿಟ್ಟ ಮಹಾತ್ಮರು ವಿವೇಕಾನಂದರು, ಅವರು ಬದುಕಿದ ದಾರಿ ನಮಗೆ ಮಾರ್ಗದರ್ಶಕ.
ಸ್ವಂತ ಬುದ್ದಿಯ ಉಪಯೋಗದೊಂದಿಗೆ ಆಲೋಚನೆ ಹಾಗೂ ನಿರ್ಧಾರಗಳಿದ್ದಾಗ ವೃತ್ತಿಯಲ್ಲಿ ಮನಸ್ಸು ಹಾಗೂ ಕ್ರಿಯಾಶೀಲತೆ ಕಾಣಬಹುದು. ವೃತ್ತಿಗೆ ಧರ್ಮದ ಬೆಂಗಾವಲು ಇದ್ದಾಗ ಪರಿಪೂರ್ಣತೆ ಲಭ್ಯ. ಬುದ್ದಿ, ಏಕಾಗ್ರತೆಗೆ ಧ್ಯಾನ ಸೂಕ್ತ ಮಾರ್ಗ, ನಿನ್ನೊಳಗೆ ನೀ ಕಳೆಯುವ ಸಮಯ ಕಳೆದಷ್ಟು ನಿನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯ. ಕುರುಡು ಅನುಕರಣೆ ಮಾಡುವುದನ್ನು ಬಿಟ್ಟು ಬಲವಾದ ಆಲೋಚನೆ, ವಿಷಯ ಜ್ಞಾನದೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಿಯೆಂದು ಆಂಧ್ರಪ್ರದೇಶ ಕಡಪಾದ ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿ ಅನುಪಮಾನಂದಾಜಿ ಹೇಳಿದರು. ಅವರು ಉಜಿರೆ ಶ್ರೀ ಧ. ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಮೌಲ್ಯ ಶಿಕ್ಷಣ’ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಮಾತನಾಡಿ, ಮೌಲ್ಯಯುತ ಬದುಕು ಸಂತೋಷ ನೀಡುವುದು, ಹೆಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆ ಮೌಲ್ಯವನ್ನು ಕಲಿಕೆಯಲ್ಲಿ ಅಳವಡಿಸಿ ಪಾಲಿಸುವ ಕಾಳಜಿ, ಕಳಕಳಿಯುಳ್ಳವರುಯೆಂದು ನುಡಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಮಕೃಷ್ಣ ಮಠದಲ್ಲಿ ಸೇವೆ ನಿರ್ವಹಿಸುವ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿರುವ ಬೆಳ್ಳಾಲ ಗೋಪಿನಾಥ್ ರಾವ್ ಮಠದ ಕಾರ್ಯ ವೈಖರಿ ಬಗ್ಗೆ ಸಂಕ್ಷಿಪ್ತ ಪಕ್ಷಿನೋಟ ನೀಡಿದರು. ಯುವಶಕ್ತಿ ಜನಾಂಗವು ಸಶಕ್ತಿಕರಣಗೊಳ್ಳಲು ನೈತಿಕ ಅಭಿವೃದ್ಧಿಯೊಂದೇ ಸರಿಯಾದ ಮಾರ್ಗ, ಈ ನಿಟ್ಟಿನಲ್ಲಿ ಎಸ್.ಡಿ.ಎಮ್ ಸಂಸ್ಥೆಗಳ ಕೆಲಸದ ಕುರಿತಾಗಿ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಕಲಿಕೆಯ ಜೊತೆಗೆ ಚರಿತ್ರೆಯ ನಿರ್ಮಾಣ ಕೂಡ ಮುಖ್ಯವಾದುದು ಎಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲ ಮನೀಶ್ ಕುಮಾರ್, ಅಭಿಯಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಡಿ.,
ಸಂಸ್ಥೆಯ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಸುನೀಲ್ ಪಂಡಿತ್ ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕ ಪಾರ್ಶ್ವನಾಥ ಹೆಗಡೆ ನಿರೂಪಿಸಿ, ವಂದಿಸಿದರು.