ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ದೂರು

0

ಬೆಳ್ತಂಗಡಿ: ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆದ ಸುಹಾಸ್ ಶೆಟ್ಟಿ ನುಡಿ ನಮನ ಕಾರ್ಯಕ್ರಮದಲ್ಲಿ ಮುಸ್ಲಿಂ ಆಟೋ ಚಾಲಕರ ಬಗ್ಗೆ ಮಾತನಾಡಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿ ಕೋಮು ಭಾವನೆ ಕೆರಳಿಸಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಆರೋಪದಡಿ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತಿ ಶೆಟ್ಟಿ ವಿರುದ್ಧ ಸೋಶಿಯಲ್ ಟ್ರೇಡ್ ಯೂನಿಯನ್ ಗುರುವಾಯನಕೆರೆ ಇದರ ಅಧ್ಯಕ್ಷ ಅಬ್ದುಲ್ ರಹಮಾನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಸ್ಲಿಂ ಆಟೋ ರಿಕ್ಷಾ ಚಾಲಕರ ಬಗ್ಗೆ ಹಾಗೂ ಮುಸ್ಲಿಂ ಅಂಗಡಿಯಗಳಲ್ಲಿ ವ್ಯಾಪಾರ-ವ್ಯವಹಾರ ಬಹಿಷ್ಕರಿಸುವಂತೆ ಹೇಳಿಕೆ ನೀಡಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟಿ ಸಮಾಜವನ್ನು ಹಿಂದು-ಮುಸ್ಲಿಂ ಎಂದು ವಿಭಜಿಸಿ ಕೋಮು ಭಾವನೆಯನ್ನು ಕೆರಳಿಸಿ, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವಂತಹ ಭಾಷಣವನ್ನು ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಮೇ.೧೧ರಂದು ಗುರುವಾಯನಕೆರೆ ಬಂಟರ ಭವನ ಎಂಬಲ್ಲಿ ನಡೆದ ಸುಹಾಸ್ ಶೆಟ್ಟಿಗೆ ನುಡಿನಮನ ಕಾರ್ಯಕ್ರಮದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಎಂಬವರು ಭಾಷಣ ಮಾಡುತ್ತಾ ಗುರುವಾಯನಕೆರೆಯಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿ, ಮುಸ್ಲಿಮರಲ್ಲಿ ವ್ಯಾಪಾರ ಮಾಡಬಾರದು, ಮುಸ್ಲಿಂ ವ್ಯಕ್ತಿಗಳ ಆಟೋ ರಿಕ್ಷಾವನ್ನು ಉಪಯೋಗಿಸಬಾರದು.

ಮುಸ್ಲಿಮರ ಜೊತೆಗಿನ ವ್ಯಾಪಾರ-ವ್ಯವಹಾರವನ್ನು ಬಹಿಷ್ಕರಿಸುವಂತೆ ಬಹಿರಂಗವಾಗಿ ಕರೆಯನ್ನು ನೀಡುತ್ತಾ ಕೋಮು-ಸೌರ್ಹಾರ್ದವನ್ನು ಕೆಡಿಸುವಂತಹ ಭಾಷಣ ಮಾಡಿರುತ್ತಾರೆ. ಅದೂ ಅಲ್ಲದೇ ಗುರುವಾಯನಕೆರೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾದಲ್ಲಿ ಕಷ್ಟಪಟ್ಟು ದುಡಿಯುವಂತಹ ಮುಸ್ಲಿಂ ಆಟೋ ಚಾಲಕರ ಬಗ್ಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಾ ಹಿಂದುಗಳು ಮುಸ್ಲಿಮರ ಆಟೋಗಳನ್ನು ಉಪಯೋಗಿಸದಂತೆ ಕರೆ ನೀಡಿರುತ್ತಾರೆ. ಆದ್ದರಿಂದ ಇವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜರಗಿಸಬೇಕೆಂದು ದೂರಿನಲ್ಲಿ ಅಬ್ದುಲ್ ರಹಿಮಾನ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here