೫೦ ವರ್ಷಗಳಿಂದ ವಾಸವಿದ್ದ ಕುಟುಂಬವನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆಮನೆ ಧ್ವಂಸ, ಎರಡು ಎಕರೆ ಕೃಷಿ ನಾಶ ಪಡಿಸಿ ಗಿಡ ನೆಟ್ಟ ಅಧಿಕಾರಿಗಳು

0

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಅರಸಿನಮತ್ತಿಯಲ್ಲಿ ಐದು ದಶಕಗಳಿಂದ ವಾಸವಿದ್ದ ಕುಟುಂಬವೊಂದನ್ನು ಶುಕ್ರವಾರ ಒಕ್ಕಲೆಬ್ಬಿಸಿದೆ. ಪಿ.ಟಿ.ಜೋಸೆಫ್ ಎಂಬವರನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕಲೆಬ್ಬಿಸಿದ್ದು ಅವರ ಮನೆಯನ್ನು ಧ್ವಂಸಗೊಳಿಸಿದ್ದಾರೆ. ಕೃಷಿಯನ್ನು ಸಂಪೂರ್ಣವಾಗಿ ನಾಶಪಡಿಸಿ ಆ ಪ್ರದೇಶದಲ್ಲಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ. ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಜೋಸೆಫ್ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕುಪತ್ರವನ್ನು ರದ್ದುಪಡಿಸಿದ ಅರಣ್ಯ ಇಲಾಖೆ ಇದೀಗ ಯಾವುದೇ ಕನಿಷ್ಠ ಪರಿಹಾರವನ್ನೂ ನೀಡದೆ ಏಕಾಏಕಿ ಒಕ್ಕಲೆಬ್ಬಿಸಿದೆ. ಇದರಿಂದ ಬೇರೆ ಜಮೀನಾಗಲಿ ಮನೆಯಾಗಲಿ ಇಲ್ಲದ ಆ ಕುಟುಂಬ ಅಕ್ಷರಶಃ ಬೀದಿ ಪಾಲಾದಂತಾಗಿದೆ. ಜೋಸೆಫ್ ಕುಟುಂಬ ಕಳೆದ ೫೦ ವರ್ಷಗಳಿಂದ ವಾಸವಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕರೆ ಜಾಗದಲ್ಲಿದ್ದ ಫಲಭರಿತ ಅಡಿಕೆ ಮರ, ತೆಂಗಿನಮರ ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದೆ. ಇಲ್ಲಿ ಅರಣ್ಯ ಇಲಾಖೆಯ ಬೋರ್ಡ್ ಅಳವಡಿಸಲಾಗಿದೆ.

ಹಲವು ಕುಟುಂಬಗಳಿಗೆ ನೋಟಿಸ್?: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುತ್ತಿರುವ ಹಲವು ಕುಟುಂಬಗಳಿಗೆ ಈಗಾಗಲೇ ಜಮೀನು ಅತಿಕ್ರಮಣದ ಬಗ್ಗೆ ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದವರು ನೋಟಿಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ವಾಸ ಇರುವ ಕುಟುಂಬಗಳಿಗೆ ನೋಟಿಸ್ ನೀಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನಷ್ಟು ಒಕ್ಕಲೆಬ್ಬಿಸುವ ಪ್ರಕ್ರಿಯೆಗಳಿಗೆ ಅರಣ್ಯ ಇಲಾಖೆ ಮುಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ೧೯೭೮ರ ಸುಮಾರಿಗೆ ಪಿ.ಟಿ.ಜೋಸೆಫ್ ಅವರ ತಂದೆ ಪಿ.ಜೆ.ಥೋಮಸ್ ಇಲ್ಲಿ ಬಂದು ನೆಲೆಸಿದ್ದು ೧೯೯೭ರಲ್ಲಿ ಇವರಿಗೆ ರಾಜ್ಯ ಸರಕಾರ ಅಕ್ರಮ-ಸಕ್ರಮ ಕಾನೂನಿನಡಿಯಲ್ಲಿ ೪.೯೦ ಎಕರೆ ಜಮೀನಿಗೆ ಹಕ್ಕುಪತ್ರ ನೀಡಿತ್ತು. ಯಾವಾಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾಯಿತೋ ಆದರೊಂದಿಗೆ ಈ ಕುಟುಂಬಕ್ಕೆ ಸಂಕಷ್ಟಗಳೂ ಆರಂಭವಾದವು. ೨೦೦೪ರಲ್ಲಿ ಇವರ ಹಕ್ಕುಪತ್ರವನ್ನು ರದ್ದುಪಡಿಸಲಾಯಿತು.

ಈ ವೇಳೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಭಾಗಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗಿದ್ದು ಸರಕಾರ ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆಯನ್ನು ನೀಡಿತ್ತು. ಆದರೆ ೨೦೧೪ರಲ್ಲಿ ಅರಣ್ಯ ಇಲಾಖೆ ಜೋಸೆಫ್‌ರವರಿಗೆ ಮತ್ತೆ ನೋಟಿಸ್ ನೀಡಿ ಒಕ್ಕಲೇಳುವಂತೆ ಸೂಚಿಸಿತ್ತು. ಇದರ ವಿರುದ್ಧ ಅವರು ಅರಣ್ಯ ಇಲಾಖೆಗೆ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕೃತಗೊಂಡಿತ್ತು. ಇವರಿಗೆ ಒಕ್ಕಲೇಳುವಂತೆ ೨೦೨೫ರ ಆ.೧೬ರಂದು ಅಂತಿಮ ನೋಟಿಸ್ ನೀಡಿ ಆ.೩೬ರೊಳಗೆ ಸ್ಥಳ ತೆರವು ಮಾಡುವಂತೆ ಸೂಚಿಸಿತ್ತು. ಇದೀಗ ಅ.೩೧ರಂದು ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಆಗಮಿಸಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಟ ನೇತೃತ್ವದ ತಂಡ ಜೋಸಫ್ ಅವರ ಮನೆಯನ್ನು ಹಾಗೂ ಕೃಷಿಯನ್ನು ಸಂಪೂರ್ಣವಾಗಿ ನಾಶಪಡಿಸಿ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕೆಲವು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳು ಜೋಸೆಫ್ ಜಮೀನಿನಲ್ಲಿದ್ದ ೪೦೦ಕ್ಕೂ ಅಧಿಕ ರಬ್ಬರ್ ಮರಗಳನ್ನು ಕಡಿದು ಜಾಗವನ್ನು ವಶಕ್ಕೆ ಪಡೆದುಕೊಂಡಿದ್ದರು. ಅದಕ್ಕೆ ಹೊರತಾದ ಜಾಗವನ್ನು ಜೋಸೆಫ್ ಕುಟುಂಬಕ್ಕೆ ನೀಡಿರುವುದಾಗಿ ಅಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಅಂತಹ ಯಾವುದೇ ದಾಖಲೆಗಳು ಅರಣ್ಯ ಇಲಾಖೆಯ ಬಳಿ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು.

ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ಖಂಡನೆ : ಮಲವಂತಿಗೆ ಗ್ರಾಮದ ಜೋಸೆಫ್ ಅವರ ಕುಟುಂಬ ಕಳೆದ ೫೦ಕ್ಕಿಂತ ಹೆಚ್ಚು ವರ್ಷಗಳಿಂದ ವಾಸಿಸುತ್ತಿದೆ. ಸರಕಾರ ಸಾಗುವಳಿ ಚೀಟಿ ನೀಡಿದ ಕೃಷಿ ಸ್ಥಳವನ್ನು ಅರಣ್ಯ ಪ್ರದೇಶ ಎಂಬ ಹೆಸರಿನಲ್ಲಿ ಏಕಾಏಕಿ ಒಕ್ಕಲೆಬ್ಬಿಸುವ ಕ್ರಮ ಕೃಷಿಕರಿಗೆ ಮಾಡಿದ ಅನ್ಯಾಯ ಎಂದು ಕೆ.ಎಸ್.ಎಂ.ಸಿ.ಎ. ಕೇಂದ್ರ ಸಮಿತಿ ಖಂಡಿಸಿದೆ. ಬಿಟ್ಟಿ ನೆಡುನಿಲಂರವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ಸೇರಿ ಈ ಖಂಡನಾ ನಿರ್ಣಯ ಕೈಗೊಂಡಿದೆ. ನಿರ್ದೇಶಕ ಫಾ. ಆದರ್ಶ್ ಜೋಸೆಫ್ ಮಾತನಾಡಿ ಬಡ ಕೃಷಿಕರನ್ನು ಒಕ್ಕಲೆಬ್ಬಿಸುವ ಸರಕಾರದ ಇಂಥ ಹೀನಕೃತ್ಯಗಳು ಕೂಡಲೇ ನಿಲ್ಲಿಸದಿದ್ದಲ್ಲಿ ಕೃಷಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಎಚ್ಚೆತ್ತು ಅನ್ನದಾತರನ್ನು ರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಹೇಳಿದ್ದಾರೆ. ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಮಲಯಾಟ್ಟಿಲ್ ಮಾತನಾಡಿ ಅನೇಕ ವರ್ಷಗಳಿಂದ ಕೃಷಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದ ಈ ಬಡವರನ್ನು ಬೀದಿಗಿಳಿಸಿದ್ದು ಅನ್ಯಾಯದ ಪರಮೋನ್ನತಿ ಎಂದು ಹೇಳಿದರು. ಅಧ್ಯಕ್ಷರು ಮಾತನಾಡಿ ನಮಗೆ ವಿಷಯ ತಿಳಿದದ್ದು ಕೊನೆಯ ಗಳಿಗೆಯಲ್ಲಿ. ಆದರೂ ಎಲ್ಲಾ ಅಧಿಕಾರಿಗಳಿಗೂ ರಾಜಕೀಯ ಮುಖಂಡರುಗಳಿಗೂ ವಿಷಯ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ತಡೆಹಿಡಿಯಬೇಕೆಂದು ವಿನಂತಿಸಿಕೊಂಡರೂ ಸಮಯ ಮೀರಿತ್ತು. ಇನ್ನು ಏನೂ ಮಾಡಲು ಸಾಧ್ಯ ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ಬಗ್ಗೆ ಸರಕಾರಕ್ಕೆ ತಿಳಿಸಿ ಒಕ್ಕಲೆಬ್ಬಿಸುವ ಕಾರ್ಯ ನಿಲ್ಲಿಸಲು ಪತ್ರ ಬರೆಯಲಾಗುವುದು ಎಂದು ಹೇಳಿದರು. ಜಿಮ್ಸೆನ್ ಗುಂಡ್ಯ, ಪಿ.ಆರ್. ಓ. ಸೆಬಾಸ್ಟಿಯನ್ ಪಿ.ಸಿ., ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೀರಿಲ್, ಕೇಂದ್ರ ಸಮಿತಿ ಸದಸ್ಯರಾದ ಅಲ್ಪೋನ್ಸ, ರೀನಾ ಸಿ.ಬಿ., ಜಾರ್ಜ್ ಟಿ ವಿ., ಮುಂತಾದವರು ಉಪಸ್ಥಿತರಿದ್ದರು.

ಪ್ರಾಂತ ರೈತ ಸಂಘ ಖಂಡನೆ: ಕುದುರೆಮುಖ ರಾಷ್ಟ್ರೀ ಯ ಉದ್ಯಾನವನದಿಂದ ರೈತರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ ಎಂದು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಗೌಡ ಮತ್ತು ಕಾರ್ಯದರ್ಶಿ ಶ್ಯಾಮರಾಜ್ ತಿಳಿಸಿದ್ದಾರೆ. ಪಿ.ಟಿ. ಜೋಸೆಫ್ ಅವರ ಕುಟುಂಬವನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲೆಬ್ಬಿಸಿರುವುದು ಮತ್ತು ಅವರ ಕೃಷಿಯನ್ನು ಹಾಗೂ ಮನೆಯನ್ನು ಸಂಪೂರ್ಣವಾಗಿ ನಾಶ ಪಡಿಸಿರುವುದು ಸರಕಾರದ ಬದುಕಲು ಬಿಡದ ಧೋರಣೆಯಾಗಿದೆ. ಅರಣ್ಯದಂತಿರುವ ಅಡಿಕೆ, ರಬ್ಬರ್ ಗಿಡಗಳನ್ನು ಕಡಿಯುವುದು ಅರಣ್ಯನಾಶ ಮಾಡಿದಂತೆಯೇ ಆಗಿದೆ. ಕಳೆದ ೫೦ ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಸರಕಾರದಿಂದ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಅರಣ್ಯ ಇಲಾಖೆ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ತಳ್ಳಿ ಈ ಕುಟುಂಬವನ್ನೇ ಬೀದಿ ಪಾಲು ಮಾಡಿರುವುದು ಖಂಡನೀಯ. ಕಳೆದ ೫೦ ವರ್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು, ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ್ದು ಅರಣ್ಯ ಇಲಾಖೆಯ ಅಮಾನವೀಯ ನಡೆಯಾಗಿದೆ ಎಂದು ಲಕ್ಷ್ಮಣ ಗೌಡ ಮತ್ತು ಶ್ಯಾಮರಾಜ್ ತಿಳಿಸಿದ್ದಾರೆ.

ಪರಿಹಾರ ನೀಡಲು ಸಿಪಿಐಎಂ ಆಗ್ರಹ: ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಪೊಲೀಸ್ ಬೆದರಿಕೆಯೊಂದಿಗೆ ಜೋಸೆಫ್ ಅವರ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು ಅವರ ಕೃಷಿ ಮತ್ತು ವಾಸದ ಮನೆಯನ್ನು ಸಂಪೂರ್ಣವಾಗಿ ನಾಶ ಪಡಿಸಿರುವುದು ಅತ್ಯಂತ ಖಂಡನೀಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ತಿಳಿಸಿದ್ದಾರೆ. ಕಳೆದ ಐದು ದಶಕದಿಂದಲೂ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕು ಪತ್ರವನ್ನು ರದ್ದುಪಡಿಸಿದ ಸರಕಾರ ಇದೀಗ ಯಾವುದೇ ಕನಿಷ್ಟ ಪರಿಹಾರನ್ನೂ ನೀಡಿದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಹಾಕಿರುವುದು ಸರಿಯಲ್ಲ. ಈ ಕುಟುಂಬ ಈಗ ಬೀದಿಪಾಲಾದಂತಾಗಿದೆ. ಇವರು ಕಳೆದ ೫೦ ವರ್ಷಗಳಿಂದ ಬದುಕಿದ್ದ ಮನೆಯನ್ನು ನಾಶಪಡಿಸಲಾಗಿದ್ದು ಸುಮಾರು ಎರಡು ಎಕ್ರೆ ಜಾಗದಲ್ಲಿದ್ದ ಫಲಕೊಡುವ ಅಡಿಕೆ ಮರಗಳನ್ನು ತೆಂಗಿನ ಮರಗಳನ್ನು ಹಾಗೂ ಇತರ ಕೃಷಿಯನ್ನು ಪೂರ್ಣ ಕಡಿದುರುಳಿಸಲಾಗಿದ್ದು ಅರಣ್ಯ ಇಲಾಖೆಯ ಹಸಿರು ಮರಗಳ ನಾಶ ಕಾರ್ಯ ಕಾನೂನು ಬಾಹಿರವೇ ಆಗಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರದ ರೈತ ವಿರೋಧಿ ಧೋರಣೆಯೇ ಆಗಿದೆ. ತಕ್ಷಣ ಇವರಿಗೆ ಪುನರ್ವಸತಿ ಮತ್ತು ಪರಿಹಾರ ನೀಡಲು ಸಿಪಿಐಎಂ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಬಿ.ಎಂ. ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here