
ಬೆಳ್ತಂಗಡಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸುತ್ತೇನೆ. ಈ ಕೃತ್ಯಕ್ಕೆ ನೇರ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರ ಕಾರಣ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದಾರೆ.
ಸುಹಾಸ್ ಮತ್ತು ಸಂಗಡಿಗರ ವಾಹನವನ್ನು ಪ್ರತೀ ನಿತ್ಯ ತಪಾಸಣೆಯನ್ನು ಮಾಡಿ, ಅವರಲ್ಲಿ ಯಾವುದೇ ರೀತಿಯಾದಂತಹ ಆತ್ಮ ರಕ್ಷಣೆಗಾಗಿ ಬೇಕಾದಂತಹ ವಸ್ತುವನ್ನು ಇಡದ ರೀತಿಯಲ್ಲಿ ಪೊಲೀಸ್ ಇಲಾಖೆ ಕಳೆದ ಒಂದು ತಿಂಗಳಿನಿಂದ ಬೆನ್ನು ಬಿದ್ದಿದೆ. ಇದರ ಹಿಂದೆ ಯಾವ ಯೋಚನೆ ಪೊಲೀಸ್ ಇಲಾಖೆಗೆ ಇದೆ ಎಂಬುವುದನ್ನು ಹರೀಶ್ ಪೂಂಜ ಪ್ರಶ್ನಿಸಿದ್ದಾರೆ.
ಒಂದು ಸಿನಿಮಾ ಮಾದರಿ ರೀತಿಯಲ್ಲಿ ದುಷ್ಕರ್ಮಿಗಳು ಸುಹಾಸ್ ಶೆಟ್ಟಿಯವರನ್ನು ಕೊಲೆ ನಡೆಸಿ, ಅಟ್ಟಹಾಸವನ್ನು ಮೆರೆದಿದ್ದಾರೆ. ಒಬ್ಬ ಕಾರ್ಯಕರ್ತನನ್ನು ವಿನಾಕಾರಣ ಹತ್ಯೆ ಮಾಡಿರುವಂತಹದ್ದು ಖಂಡಿತ ಹಿಂದೂ ಸಮಾಜ ಇದನ್ನು ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತನ ಹತ್ಯೆಗೆ ಸೂಚನೆ ಇದೇ ಎನ್ನುವಂತಹದ್ದನ್ನು ತಿಳಿದುಕೊಳ್ಳದಷ್ಟು, ಕಾನೂನು ಸುವ್ಯವಸ್ಥೆ ಈ ರಾಜ್ಯದಲ್ಲಿ ಹದಗೆಟ್ಟಿದೆ ಎಂಬುವುದು ಈ ಪ್ರಕರಣದ ಮೂಲಕ ಗಮನಕ್ಕೆ ಬಂದಿದೆ.
ಹಿಂದೂ ಕಾರ್ಯಕರ್ತರ ರಕ್ಷಣೆಗೋಸ್ಕರ ನಾವು ಖಂಡಿತ ಬದ್ಧರಿದ್ದೇವೆ. ಈ ಹತ್ಯೆಗೆ ನೇರವಾಗಿ ಪೊಲೀಸ್ ಇಲಾಖೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಪೊಲೀಸ್ ಇಲಾಖೆಗೆ ಮಾಹಿತಿ ಇದ್ದರೂ, ಈ ರೀತಿ ನಿರ್ಲಕ್ಯ ವಹಿಸಿರುವುದು ಈ ಕೃತ್ಯಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದಿಂದ ನಡೆಯುವ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ ಇದನ್ನು ರಾಷ್ಟ್ರೀಯ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಹರೀಶ್ ಪೂಂಜ ಒತ್ತಾಯಿಸಿದ್ದಾರೆ.