
ಬೆಳ್ತಂಗಡಿ: ತಾಲೂಕಿನ ತೆಕ್ಕಾರು ಗ್ರಾಮದಲ್ಲಿನ ಎರಡು ಮನೆಗಳಿಗೆ ನುಗ್ಗಿದ ಕಳ್ಳ ಮನೆಯೊಂದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ನಗ ನಗದನ್ನು ಕದ್ದೊಯ್ದ ಘಟನೆ ಎ. 22ರಂದು ರಾತ್ರಿ ನಡೆದಿದೆ.
ಮನೆಯಲ್ಲಿ ಮನೆ ಮಂದಿ ಮಲಗಿದ್ದಾಗಲೇ ಮನೆಗೆ ನುಗ್ಗಿರುವುದು ಈ ಕಳವು ಪ್ರಕರಣದಲ್ಲಿ ಕಂಡು ಬಂದಿರುವ ವಿಶೇಷತೆಯಾಗಿದೆ. ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಎಂಬವರ ಮನೆಯಲ್ಲಿ ಅವರ ಪತ್ನಿ ಮತ್ತು ನಾದಿನಿ ಮಲಗಿದ್ದಾಗ ಮನೆಯೊಳಗೆ ನುಗ್ಗಿದ ಕಳ್ಳ ನಾದಿನಿಯ ವ್ಯಾನಿಟಿ ಬ್ಯಾಗಿನಲ್ಲಿರಿಸಲಾದ 12 ಗ್ರಾಮ್ ತೂಕದ ಚಿನ್ನದ ಬಳೆ, ಒಟ್ಟು 12 ಗ್ರಾಮ್ ತೂಕವಿರುವ 3 ಉಂಗುರ ಹಾಗೂ ಒಟ್ಟು 6 ಗ್ರಾಮ್ ತೂಕವಿರುವ 4 ಉಂಗುರ, ಮತ್ತು 3 ಸಾವಿರ ನಗದು ಹಣವನ್ನು ದೋಚಿ, ಬ್ಯಾಗನ್ನು ಮನೆ ಸಮೀಪದ ಕೋಳಿ ಅಂಗಡಿಯ ಹಿಂಭಾಗಕ್ಕೆ ಎಸೆದು ಪರಾರಿಯಾಗಿದ್ದಾನೆ.
ಇದೇ ಗ್ರಾಮದ ಕೋಡಿ ಮನೆ ನಿವಾಸಿ ಅನ್ವರ್ ಎಂಬವರ ಮನೆಗೂ ಮನೆ ಮಂದಿ ಮಲಗಿದ್ದಾಗಲೇನುಗ್ಗಿದ ಕಳ್ಳಮನೆಯೊಳಗಿನ ಕಪಾಟನ್ನು ಜಾಲಾಡಿ, ಕಪಾಟಿನಲ್ಲಿದ್ದ ನಗದು ಹಣವನ್ನು ಜೇಬಿಗೆ ತುಂಬಿಸುವ ಭರದಲ್ಲಿ ಅಲ್ಲೇ ಕೆಳಕ್ಕೆ ಬೀಳಿಸಿದ್ದನೆನ್ನಲಾಗಿದೆ. ಮನೆಯ ಯಜಮಾನಿ ನೀರು ಕುಡಿಯಲೆಂದು ಎದ್ದಾಗ ಕಳ್ಳ ಓಡಿ ತಪ್ಪಿಸಿಕೊಂಡಿದ್ದ. ಈ ಕಾರಣದಿಂದಾಗಿ ಅನ್ವರ್ ಮನೆಯಲ್ಲಿ ಕಳ್ಳತನದ ಯತ್ನ ನಡೆದಿದ್ದರೂ ಯಾವುದೇ ವಸ್ತು ಕಳವಿಗೀಡಾಗಿಲ್ಲ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ನಡೆಸುತ್ತಿದ್ದಾರೆ.
ಹೆಚ್ಚಿದ ಕಳವು ಪ್ರಕರಣ: ಜನತೆಯಲ್ಲಿ ಆತಂಕ: ಇತ್ತೀಚಿನ ದಿನಗಳಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಹಲವು ಕಳವು ಪ್ರಕರಣಗಳು ನಡೆಯುತ್ತಿದ್ದರೂ, ಪೊಲೀಸ್ ತನಿಖೆಯಲ್ಲಿ ಪ್ರಕರಣ ಪತ್ತೆ ಹಚ್ಚಲ್ಪಟ್ಟಿರುವ ಬಗ್ಗೆ ಯಾವುದೇ ಸುದ್ದಿಗಳು ಇಲ್ಲದಿರುವುದರಿಂದ ಕಳ್ಳರಿಗೆ ನಿಯಂತ್ರಣ ಇಲ್ಲದಂತಾಗಿದೆ.
ಮನೆ ಮಂದಿ ಇಲ್ಲದಿದ್ದಾಗ ನಡೆಯುವ ಕಳವು ಪ್ರಕರಣ ಒಂದೆಡೆಯಾದರೆ, ವ್ಯಾಪಾರದ ಸೋಗಿನಲ್ಲಿ ಬಂದು ಚಿನ್ನಾಭರಣವನ್ನು ಎಗರಿಸುವ ಹೊಸತಾದ ಕಳ್ಳತನ ಇನ್ನೊಂದೆಡೆಯಾಗಿದೆ. ಇದೀಗ ಮನೆ ಮಂದಿ ಮನೆಯಲ್ಲಿ ಇದ್ದರೂ ಮನೆಗೆ ಕಳ್ಳರು ನುಗ್ಗಿ ಕದಿಯುತ್ತಾರೆಂದರೆ ಯಾವುದೂ ಕೂಡಾ ಭದ್ರತೆ ಇಲ್ಲದ ಸ್ಥಿತಿಯಂತಾಗಿದೆ. ಇದು ಸಹಜವಾಗಿ ನಾಗರಿಕರನ್ನು ಕಳವಳಕ್ಕೀಡು ಮಾಡಿದೆ. ಈ ಕಾರಣಕ್ಕೆ ಕಳ್ಳತನ ಪ್ರಕರಣವನ್ನು ಭೇಧಿಸುವಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ, ಇಲಾಖಾ ಕಾರ್ಯವೈಖರಿ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ನಡೆಸಬೇಕೆಂದು ಉಪ್ಪಿನಂಗಡಿ ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಪೊಲೀಸ್ ಇಲಾಖೆಯನ್ನು ಅಗ್ರಹಿಸಿದ್ದಾರೆ.