
ಬೆಳ್ತಂಗಡಿ: ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಕಿರೀಟವೆನಿಸಿದ ಶಾರದ ಮಾತೆಯ ನೆಲೆವೀಡಾದ ಜಮ್ಮು- ಕಾಶ್ಮೀರವನ್ನು ಸಂರಕ್ಷಿಸಿ ಆರ್ಟಿಕಲ್ 370 ರದ್ದುಗೊಳಿಸುವ ಮತ್ತು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ತೆಗೆದುಕೊಂಡ ದಿಟ್ಟ ಕ್ರಮದ ಪರಿಣಾಮ ಜಮ್ಮು ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದಿರೋದರಿಂದ ಉಗ್ರರು ಹತಾಶರಾಗಿ ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೇಡಿತನದ ಉಗ್ರರ ದಾಳಿಗೆ ಬಲಿಯಾಗಿರುವವರ ಸಾವು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಗಳಿಗೆ ಈ ದಾರುಣ ಘಟನೆಯ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಮುಂದಿನ ದಿನಗಳಲ್ಲಿ ಇಂತಹ ಹತಾಶ ಉಗ್ರರ ರಣಹೇಡಿ ಕೃತ್ಯಗಳು ಮರುಕಳಿಸದಂತೆ ಕೇಂದ್ರ ಸರ್ಕಾರದಿಂದ ಉಗ್ರರಿಗೆ ದಿಟ್ಟ ಸಂದೇಶ ರವಾನೆಯಾಗಲಿ ಹಾಗೆಯೇ ಎಕ್ಸಾಮ್ ಸಂದರ್ಭದಲ್ಲಿ ಜನಿವಾರ ಕಳಚಿದ ಕೃತ್ಯ ನಡೆಸಿದವರಿಗೂ ರಾಜ್ಯ ಸರಕಾರ ದಿಟ್ಟ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕೆಂದು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪೂವಾಜೆ ಕುಶಾಲಪ್ಪ ಗೌಡ ಮತ್ತು ಗೌರವಾಧ್ಯಕ್ಷ ಹೆಚ್. ಪದ್ಮ ಗೌಡ, ಯುವವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಹಾಗೂ ಕಾರ್ಯದರ್ಶಿಗಳು ಎಲ್ಲಾ ಪದಾಧಿಕಾರಿಗಳು ಮತ್ತು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.