

ಧರ್ಮಸ್ಥಳ: ಕಲ್ಯಾಣ ಮಂಟಪ ನಿರ್ಮಾಣ ಪುಣ್ಯದ ಕಾಯಕ. ಧರ್ಮಸ್ಥಳದ ಬಹುಮುಖಿ ಸೇವೆ, ಸಾಧನೆ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಎ. 20ರಂದು ಧರ್ಮಸ್ಥಳದಲ್ಲಿ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ ಮತ್ತು ಶ್ರೀ ಗೌರೀಶಂಕರ ಎಂಬ ಮೂರು ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.
ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಎಲ್ಲರಿಗೂ ಅವಕಾಶವನ್ನು ಮಾತ್ರ ಕೊಡುತ್ತಾರೆ. ಅದನ್ನು ಸದುಪಯೋಗ ಮಾಡಿ, ಉನ್ನತ ಸಾಧನೆ ಮಾಡುವುದು ನಮ್ಮ ಉದ್ದೇಶವಾಗಿರಬೇಕು. ದೇವರಲ್ಲಿ ಶ್ರದ್ಧಾ-ಭಕ್ತಿಯಿಂದ ನಂಬಿಕೆ ಇಟ್ಟು ಪ್ರಾರ್ಥನೆ ಮಾಡಿದಾಗ ನಮ್ಮ ಇಷ್ಟಾರ್ಥಗಳು ಸುಲಲಿತವಾಗಿ ಈಡೇರುತ್ತವೆ.

ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಮನುಷ್ಯತ್ವದಿಂದ ಸಾರ್ಥಕ ಜೀವನ ನಡೆಸಿದಾಗ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ.
ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಚಿರಪರಿಚಿತವಾಗಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. ಪರಿಶುದ್ಧ ಮನಸ್ಸಿನಿಂದ ಪುಣ್ಯಕ್ಷೇತ್ರಗಳ ದರ್ಶನ ಮಾಡಿದಾಗ ನಮಗೆ ದೇವರ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಎಂಬ ಚತುರ್ದಾನಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಟೀಕೆ ಮಾಡುವುದು ಸುಲಭ. ಹೆಗ್ಗಡೆಯವರು ಜೈನರು, ದೇವಸ್ಥಾನ ಹಿಂದೂ ದೇವಸ್ಥಾನ ಎಂದು ಟೀಕಿಸುವವರನ್ನು ಖಂಡಿಸಿದ ಡಿ.ಕೆ.ಶಿ. ಹೆಗ್ಗಡೆಯವರು ಇದಕ್ಕೆ ಅಂಜಬೇಕಾಗಿಲ್ಲ, ಅಳುಕಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಬದುಕಿನ ನಾಲ್ಕು ಹಂತಗಳಲ್ಲಿ ಮದುವೆಯೊಂದಿಗೆ ಗೃಹಸ್ಥಾಶ್ರಮ ಸೇರುವುದು ಅತ್ಯಂತ ಪವಿತ್ರ ಕಾರ್ಯ ಹಾಗೂ ಜೀವನದ ಮುಖ್ಯ ಹಂತವಾಗಿದೆ ಎಂದು ಹೇಳಿದರು. ಗೃಹಸ್ಥ ಜೀವನ ಅಮೂಲ್ಯವಾಗಿದ್ದು, ದಂಪತಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು. ಧರ್ಮಸ್ಥಳದಲ್ಲಿ ಮದುವೆ ಆದರೆ ತಮ್ಮ ಬದುಕು ಸಾರ್ಥಕ ಹಾಗೂ ಸುಖಮಯವಾಗುತ್ತದೆ ಎಂದು ಭಕ್ತರಲ್ಲಿ ನಂಬಿಕೆ ಹಾಗೂ ವಿಶ್ವಾಸವಿದೆ.
ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ಮೂರು ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಬೆಳ್ತಂಗಡಿ, ಭದ್ರಾವತಿ, ಬೆಂಗಳೂರು, ಬಂಟ್ವಾಳ, ಮೈಸೂರು ಮೊದಲಾದ ಕಡೆಗಳಲ್ಲಿ ಕೂಡಾ ಧರ್ಮಸ್ಥಳದ ವತಿಯಿಂದ ಕಲ್ಯಾಣಮಂಟಪಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಕೆರೆಗಳಿಗೆ ಕಾಯಕಲ್ಪ, ಶುದ್ಧ ಕುಡಿಯುವ ನೀರು ಪೂರೈಕೆ, ಸ್ವ-ಸಹಾಯ ಸಂಘಗಳು, ಸಾಮೂಹಿಕ ವಿವಾಹ ಮೊದಲಾದ ಧರ್ಮಸ್ಥಳದ ಸೇವಾಕಾರ್ಯಗಳನ್ನು ಸರ್ಕಾರ ಕೂಡಾ ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಗೊಳಿಸಿರುವುದು ತಮಗೆ ಹೆಚ್ಚಿನ ಸಂತೋಷ ಉಂಟು ಮಾಡಿದೆ ಎಂದು ಹೆಗ್ಗಡೆಯವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೆಗ್ಗಡೆಯವರು ಕ್ಷೇತ್ರದ ವತಿಯಿಂದ ಗೌರವಿಸಿ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ಶಿವರಾಂ, ಡಿ ಸುರೇಂದ್ರ ಕುಮಾರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಕಲ್ಯಾಣ ಮಂಟಪದ ಎಂಜಿನಿಯರ್ ಮಂಜುಕೀರ್ತನ್, ಕಾಮಗಾರಿ ವ್ಯವಸ್ಥಾಪಕ ಯಶೋಧರ ಮತ್ತು ಕಟ್ಟಡ ಮೇಲ್ವಿಚಾರಕ ನಿಖಿಲ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್,
ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಡಿ. ನಿಶ್ಚಲ್ ಕುಮಾರ್ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಎಂಜಿನಿಯರ್ ಯಶೋಧರ ವಂದಿಸಿದರು.