

ಕೊಕ್ಕಡ: ವಿದ್ಯಾರ್ಥಿಗಳು ಜಾತಿಭೇದವಿಲ್ಲದೆ ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಎಂದು ಬಾಳಬೇಕು. ಜೀವನದಲ್ಲಿ ಶ್ರೇಷ್ಠ ವ್ಯಕ್ತಿಯಾಗಬೇಕಾದರೆ ವಿದ್ಯೆ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಸಹ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ಇಲ್ಲಿಯ ನಿವೃತ್ತ ಶಿಕ್ಷಕ ಕುಂಞಪ್ಪ ಗೌಡ ನುಡಿದರು.
ಎ. 11 ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ 5ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ, ಶ್ರೀ ರಾಮ ವಿದ್ಯಾಸಂಸ್ಥೆ ಪಟ್ಟೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಎರಡನೇ ದಿನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಣ ಹೊಂದಿದ್ದರೆ ಸಾಲದು ಶಿಕ್ಷಣದೊಂದಿಗೆ ಸಂಸ್ಕಾರ ಇದ್ದಾಗ ಮಾತ್ರ ಆ ಶಿಕ್ಷಣಕ್ಕೆ ಬೆಲೆ ಬರಲು ಸಾಧ್ಯ ಎಂದರು. ನಮಸ್ಕಾರ ಹೊಂದಿದ ವ್ಯಕ್ತಿ ಜೀವನದಕ್ಕಿ ಸೋಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಕ್ಕಳಿಗೆ ಕಿವಿ ಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ವಹಿಸಿದ್ದರು. ವೇದಿಕೆಯಲ್ಲಿ ಕೊಕ್ಕಡದ ಶ್ರೀರಾಮ ಸೇವಾ ಟ್ರಸ್ಟ್ ಉಪಾಧ್ಯಕ್ಷ ಸಾಂತಪ್ಪ ಮಡಿವಾಳ ಉಪಸ್ಥಿತರಿದ್ದರು.
ಎರಡನೇ ದಿನ 73 ಹುಡುಗರು ಹಾಗೂ 59 ಹುಡುಗಿಯರು ಸೇರಿದಂತೆ 132 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಶಿಬಿರದ ಮೊದಲನೇ ಅವಧಿಯಲ್ಲಿ ಸೌತಡ್ಕ ಶಿಶು ಮಂದಿರದ ಶಿಕ್ಷಕಿ ಲಲಿತಾ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕವನ್ನು ಅಭ್ಯಾಸ ಮಾಡಿಸಿದರು.
ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಶೇಟ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಎರಡನೇ ಅವಧಿಯಲ್ಲಿ ಕೊಕ್ಕಡದ ಪಂಚಮಿಹಿತಾಯೂರ್ಧಾಮದ ವೈದ್ಯೆ ಡಾ. ತಾರಾ ಗಣೇಶ್ ಆರೋಗ್ಯಕ್ಕಾಗಿ ಉತ್ತಮ ಜೀವನ ಕ್ರಮ, ಹಾಗೂ ನಾಲ್ಕನೇ ಅವಧಿಯಲ್ಲಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯ ಹರೀಶ್ ಚಂದ್ರ ಅಡ್ಕರ್ ರವರು ಚಿತ್ರಕಲೆ ಮತ್ತು ಕ್ರಾಫ್ಟ್ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸಂಜೆ ವಿದ್ಯಾರ್ಥಿಗಳಿಗೆ ದೇಶಿಯ ಆಟಗಳನ್ನು ಆಡಿಸಲಾಯಿತು. ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ವೇತ ಕುಮಾರಿ ಎಂ. ಪಿ. ಸ್ವಾಗತಿಸಿ, ಸುಪ್ರೀತಾ. ಎ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು. ಏ. 14ರವರೆಗೆ ಶಿಬಿರ ನಡೆಯಲಿದೆ. ಸ್ವಾತಿ ಕೆ.ವಿ ವಂದಿಸಿದರು.