ಪಿಎಫ್‌ಐ ಆಯೋಜಿಸಿದ್ದ ಜನಾಂದೋಲನಾ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಭಾಷಣ ಪ್ರಕರಣ – ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪಿ ಬೆಳ್ಳಾರೆಯ ಶಾಫಿ ಬೆಳ್ತಂಗಡಿ ಕೋರ್ಟ್‌ಗೆ ಹಾಜರು

0

ಬೆಳ್ತಂಗಡಿ: ಬಿಜೆಪಿ ಯುವ ಮೋರ್ಚಾದ ಮುಖಂಡರಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ೨ ವರ್ಷಗಳ ಹಿಂದೆ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಎ.೭ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ವೇಳೆ ವಕೀಲ ಪ್ರಶಾಂತ್ ಉಪಸ್ಥಿತರಿದ್ದರು.

ಶಾಫಿ ಬೆಳ್ಳಾರೆ ವಿರುದ್ಧದ ಪ್ರಕರಣ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ 104/2014ರ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಮುಖಂಡನಾಗಿರುವ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಶಾಫಿ ಮತ್ತಿತರರ ವಿರುದ್ಧ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ ಶಾಫಿ ಬೆಳ್ಳಾರೆ ಮತ್ತಿತರರು ದಿನಾಂಕ 30-01-2014ರಂದು ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಸಾಮರಸ್ಯ ಉಳಿಸೋಣ ಕೋಮುವಾದ ಅಳಿಸೋಣ ಎಂಬ ಜನಾಂದೋಲನಾ ಕಾರ್ಯಕ್ರಮದ ಸಭೆಯಲ್ಲಿ ಸಂಜೆ 4 ಗಂಟೆಯಿಂದ 6 ಗಂಟೆಯ ಮಧ್ಯೆ ಕೋಮು ಸೌಹಾರ್ಧವನ್ನು ಕೆಣಕಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ವೈರತ್ವವನ್ನು ಹುಟ್ಟಿಸುವಂತೆ ಪ್ರಚೋದನಾಕಾರಿ ಬಾಷಣ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಮಾರು ವರ್ಷಗಳಿಂದ ಈ ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಾದರೆ ಒಂದಲ್ಲ ಒಂದು ದಿನ ಅದೇ ಸ್ಥಳದಲ್ಲಿ ಡಿಸೆಂಬರ್ 6ರ ಅದೇ ದಿನ ಬಾಬರಿ ಮಸೀದಿಯನ್ನು ನಿರ್ಮಿಸುತ್ತೇವೆ. ನಿಮಗೆ ತಾಕತ್ತಿದ್ದರೆ ಒಂದು ದಿನ ಫಿಕ್ಸ್ ಮಾಡಿ ಆ ದಿನ ಮಕ್ಕಳನ್ನು ಕರೆಯಬೇಡಿ, ಹೆಂಗಸರನ್ನು ಕರೆಯಬೇಡಿ, ಪ್ರಾಯಸ್ಥರನ್ನು ಕರೆಯಬೇಡಿ. ನೀವು ಎಲ್ಲಾ ಬನ್ನಿ. ಬ್ಯಾರಿ ತಂಟೆಗೆ ಬರಲಿ. ಅದು ನಿಮ್ಮ ಕೆಪಾಸಿಟಿ. ನಿಮ್ಮ ತಾಕತ್ತನ್ನು ನಾವು ನೋಡುತ್ತೇವೆ. ಪೊಲೀಸರ ಕೆಲಸವನ್ನು ನಾವೇ ಮಾಡುತ್ತೇವೆ. ಬದುಕುವ ಹಕ್ಕು ಎಲ್ಲರಿಗೂ ಒಂದೇ. ನೀವು ಹಿಂದೂ ರಾಷ್ಟ್ರವನ್ನು ಮಾಡಲು ಹೊರಟರೆ ಒಂದಲ್ಲಾ ಒಂದು ದಿನ ಮುಸ್ಲಿಂ ರಾಷ್ಟ್ರವಾಗಿ ಮಾಡಬೇಕಾಗುತ್ತದೆ. ಮುಂದಕ್ಕೆ ಪ್ರಚೋದನೆ ಭಾಷಣ ಮಾಡಿದರೆ ತುಂಡರಿಸಿ ತೆಗೆಯಬೇಕಾಗುತ್ತದೆ. ಅವರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಬೇಕಾಗುತ್ತದೆ. ನಾವು ಪಿ.ಎಫ್.ಐ ಸಂಘಟನೆಗೆ ಸೇರುವಾಗ ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡಿರುತ್ತೇವೆ. ಅದೇನೆಂದರೆ ಇಸ್ಲಾಂಗೆ ಬೇಕಾಗಿ ತಮ್ಮ ಜೀವನವನ್ನು ಅಲ್ಲಾಹುನಿಗೆ ಅರ್ಪಿಸಲು ತಯಾರು. ಇದನ್ನು ಆರ್.ಎಸ್.ಎಸ್.ನವರು ಅರ್ಥ ಮಾಡಿಕೊಳ್ಳಲಿ ಎಂದು ಎರಡು ಸಮುದಾಯಗಳ ನಡುವೆ ವೈರತ್ವವನ್ನು ಹುಟ್ಟುಹಾಕಲು ಕೋಮು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಶಾಫಿ ಬೆಳ್ಳಾರೆ ಮತ್ತಿತರರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಫಿ ಬೆಳ್ಳಾರೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಪೊಲೀಸ್ ಭದ್ರತೆ ಮಧ್ಯೆಯೇ ಆರೋಪಿಗೆ ಮುತ್ತಿಕ್ಕಿದ ಯುವಕ: ಆರೋಪಿ ಶಾಪಿ ಬೆಳ್ಳಾರೆಗೆ ಪೊಲೀಸ್ ಭದ್ರತೆ ನಡುವೆಯೇ ಯುವಕನೋರ್ವ ಮುತ್ತಿಕ್ಕಿದ ಘಟನೆ ನಡೆದಿದೆ. ಆರೋಪಿಯನ್ನು ಇಬ್ಬರು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ದಿಢೀರ್ ಎದುರು ಬಂದ ಯುವಕನೋರ್ವ ಶಾಫಿ ಬೆಳ್ಳಾರೆ ಹಣೆಗೆ ಮುತ್ತಿಕ್ಕಿದ. ಈ ವೇಳೆ ಪೊಲೀಸರು ಆತನನ್ನು ದೂಡಿ ಮುಂದೆ ಸಾಗಿದರು. ಈ ವೀಡಿಯೋ ಇದೀಗ ವೈರಲ್ ಆಗಿದೆ.

ವೀಡೀಯೋ ಕಾನ್ಫರೆನ್ಸ್ ಮೂಲಕ ಶಾಫಿಯನ್ನು ಹಾಜರು ಪಡಿಸಲು ಜಡ್ಜ್ ಆದೇಶ: ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಆರೋಪದಡಿ ಬಂಧಿತನಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಫಿ ಬೆಳ್ಳಾರೆಯನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದ ಬೆಳ್ತಂಗಡಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಪ್ರಚೋದನಾಕಾರಿ ಭಾಷಣ ಪ್ರಕರಣದ ಮುಂದಿನ ವಿಚಾರಣೆಗಳಿಗೆ ಶಾಫಿ ಬೆಳ್ಳಾರೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸುವಂತೆ ತನಿಖಾಧಿಕಾರಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.

LEAVE A REPLY

Please enter your comment!
Please enter your name here