ಇಡೀ ಸರಕಾರ ತಿಮರೋಡಿ ವಿರುದ್ಧ ನಿಂತಂತಿದೆ: ವಕೀಲ ತಾರನಾಥ ಪೂಜಾರಿಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಹೈಕೋರ್ಟ್ ಸೂಚನೆ

0

ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರಾಗಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತನ್ನನ್ನು ಗಡೀಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಉಜಿರೆ ಗ್ರಾಮದ ತಿಮರೋಡಿ ನಿವಾಸಿ ಮಹೇಶ್ ಶೆಟ್ಟಿ(೫೮ವ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಉಭಯ ಬಣಗಳ ವಾದ ಪ್ರತಿವಾದ ಆಲಿಸಿದ ಬಳಿಕ ಈ ಆದೇಶ ನೀಡಿದೆ.

ಆದೇಶದ ಹಿನ್ನೆಲೆ: ಬಂಟ್ವಾಳ ಡಿವೈಎಸ್‌ಪಿಯ ಕೋರಿಕೆ ಮೇರೆಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂದು ವರ್ಷದ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಅ.೧೩ರಂದು ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠ ನಡೆಸಿತು. ಈ ವೇಳೆ ಅರ್ಜಿದಾರ ಮಹೇಶ್ ಶೆಟ್ಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ತಾರಾನಾಥ ಪೂಜಾರಿ ಮೂಡಿಬಿದ್ರೆ ಅವರು ಗಡಿಪಾರು ಆದೇಶದಲ್ಲಿ ಒಂದಲ್ಲ ಹತ್ತಾರು ಕಾನೂನು ಪ್ರಕ್ರಿಯೆಯ ಲೋಪಗಳಿವೆ. ಇಡೀ ಸರಕಾರ ಮತ್ತು ಗೃಹ ಇಲಾಖೆ ತಿಮರೋಡಿ ವಿರುದ್ಧ ನಿಂತಂತಿದೆ.

ತಿಮರೋಡಿ ವಿರುದ್ದದ ಕ್ರಿಮಿನಲ್ ಪ್ರಕರಣಗಳ ಕುರಿತು ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ. ಈಗಾಗಲೇ ಅವರು ಸುಮಾರು ೧೦ ಪ್ರಕರಣಗಳಲ್ಲಿ ಖುಲಾಸೆ ಆಗಿದ್ದು ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಲೋಕಸಭೆ ಚುನಾವಣೆ ವೇಳೆ ಗಲಭೆ ಎಬ್ಬಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಸಾಕ್ಷಿ ಕೊಟ್ಟಿಲ್ಲ. ಇವರ ಹೆದರಿಕೆಯಿಂದ ಸಾಕ್ಷಿಗಳು ಮುಂದೆ ಬರುವುದಿಲ್ಲ ಎಂದೆಲ್ಲ ಹೇಳಲಾಗಿದೆ. ಆದರೆ ಇದೆಲ್ಲವೂ ಸುಳ್ಳು ಎಂದು ಹೇಳಿದರು. ಇದಕ್ಕೆ ಆಕ್ಷೇಪ ಸೂಚಿಸಿ ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ತಿಮರೋಡಿ ಪರ ವಕೀಲರು ನ್ಯಾಯಾಲಯಕ್ಕೆ ಹೇಳುತ್ತಿರುವ ವಿವರಗಳು ಸರಿಯಲ್ಲ.

ಸ್ಥಳೀಯ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯಾ ಚಳವಳಿ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಸರಕಾರ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಅಲ್ಲದೆ ಅವರನ್ನು ಗಡಿಪಾರು ಮಾಡಿ ಹೊರಡಿಸಿದ ಆದೇಶದಲ್ಲಿ ಕಾನೂನು ಪ್ರಕ್ರಿಯೆಯ ಯಾವ ಲೋಪವೂ ಆಗಿಲ್ಲ ಎಂದು ವಿವರಿಸಿದರು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು. ಅಲ್ಲದೆ ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಳ್ತಂಗಡಿ: ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿ ಸಿ.ಎ. ಸೈಮನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಬಂಧನ ಭೀತಿಯಿಂದ ತಲೆ ಮರೆಸಿಕೊಂಡು ತನ್ನ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಮೂಲಕ ಮಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ವಜಾಗೊಂಡಿದೆ. ಸರಕಾರದ ಪರ ವಕೀಲರಾದ ಜುಡಿತ್ ಓಲ್ವಾ ಮಾರ್ಗರೇಟ್ ಕ್ರಾಸ್ತಾ ಮಂಡಿಸಿದ್ದ ವಾದವನ್ನು ಎತ್ತಿ ಹಿಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಅವರು ಅರ್ಜಿ ವಜಾ ಮಾಡಿದ್ದಾರೆ. ಸೆ. ೨೪ರಿಂದ ಹಲವು ಬಾರಿ ವಿಚಾರಣೆ ನಡೆದು ಅ.೪ಕ್ಕೆ ಮುಂದೂಡಿಕೆಯಾಗಿತ್ತು.

ಅಂದು ವಿಚಾರಣೆ ಬಳಿಕ ನ್ಯಾಯಾಧೀಶರು ಅ.೯ರಂದು ತೀರ್ಪು ನೀಡುವುದಾಗಿ ಪ್ರಕಟಿಸಿ ಕಲಾಪ ಮುಂದೂಡಿದ್ದರು. ತಿಮರೋಡಿ ಪರ ವಕೀಲ ದಿನೇಶ್ ಹೆಗ್ಡೆ ಉಲೇಪಾಡಿ ಮತ್ತು ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತ ಅವರ ವಾದ ಆಲಿಸಿದ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಮಧ್ಯಂತರ ಬಾಂಡ್ ಆದೇಶ ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯೂ ವಜಾ: ಬೆಳ್ತಂಗಡಿ ತಹಶೀಲ್ದಾರ್‌ರು ತನ್ನ ವಿರುದ್ಧ ಮಾಡಿರುವ ಮಧ್ಯಂತರ ಬಾಂಡ್ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಅಲ್ಲಿಸಿದ್ದ ಅರ್ಜಿಯನ್ನೂ ಮಂಗಳೂರಿನ ಜಿಲ್ಲಾ ಮೂರನೇ ಹೆಚ್ಚುವರಿ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಪದೇ ಪದೆ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ದಂಡಾಧಿಕಾರಿ ಬಾಂಡ್ ನೀಡಲು ಸೂಚಿಸಿದ್ದರು. ತಹಶೀಲ್ದಾರ್ ಅವರ ಈ ಮಧ್ಯಂತರ ಬಾಂಡ್ ಆದೇಶ ಪ್ರಶ್ನಿಸಿ ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.

ಅಕ್ರಮ ಶಸ್ತ್ರಾಸ್ತ್ರಕೇಸ್ ರದ್ದು . ಪಡಿಸಲು ಹೈಕೋರ್ಟ್‌ಗೆ ಅರ್ಜಿ

ಎಸ್‌ಐಟಿ ದೂರಿನಂತೆ ತನ್ನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಪ್ರಕರಣವನ್ನು ರದ್ದು ಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮಹೇಶ್ ಶೆಟ್ಟಿ ಶಿಮರೋಡಿ ಅರ್ಜಿ ಸಲ್ಲಿಸಿದ್ದಾರೆ. ದ.ಕ ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಆದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತನ್ನ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ಹೊಂದಿದ್ದ ಕುರಿತು ಎಸ್‌ಐಟಿಯ ಎಸ್‌ಪಿ ಸಿ.ಎ.ಸೈಮನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿರುವ ಕೇಸ್ ರದ್ದು ಪಡಿಸಿ ಮುಂದಿನ ಎಲ್ಲಾ ಕ್ರಮಗಳಿಗೆ ತಡೆ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.

LEAVE A REPLY

Please enter your comment!
Please enter your name here