ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ. ಈ ಕೇಸ್‌ನಲ್ಲಿ ಮೊದಲು ಸಾಕ್ಷಿ ದೂರುದಾರನಾಗಿ, ನಂತರ ಅರೋಪಿಯಾಗಿ ಎಸ್‌ಐಟಿಯಿಂದ ಬಂಧನಕ್ಕೊಳಪಟ್ಟು ಪ್ರಸ್ತುತ ಶಿವಮೊಗ್ಗ ಜೈಲಿನಲ್ಲಿರುವ ಮಂಡ್ಯ ಮೂಲದ ಚಿನ್ನಯ್ಯನ ವಿಚಾರಣೆಯನ್ನು ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್.ರವರು ಅ.೧೩ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು. ಚಿನ್ನಯ್ಯನ ಪರ ಪ್ಯಾನಲ್ ವಕೀಲರು ಮತ್ತು ಎಸ್‌ಐಟಿ ಪರ ವಕೀಲರಾದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಹಾಜರಿದ್ದರು. ಶಿವಮೊಗ್ಗ ಜೈಲಿನಿಂದಲೇ ವಿಚಾರಣೆಗೆ ಹಾಜರಾದ ಚಿನ್ನಯ್ಯನ ನ್ಯಾಯಾಂಗ ಬಂಧನ ಅವಧಿಯನ್ನು ೧೫ ದಿನಗಳ ಕಾಲ ವಿಸ್ತರಿಸಿರುವುದಾಗಿ ನ್ಯಾಯಾಧೀಶರು ಈ ವೇಳೆ ತಿಳಿಸಿ ವಿಚಾರಣೆ ಮುಂದೂಡಿದರು.
ನ್ಯಾಯಾಂಗ ಬಂಧನ ವಿಸ್ತರಣೆ: ಧರ್ಮಸ್ಥಳ ಮತ್ತು ಆಸುಪಾಸಿನ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಮೃತದೇಹಗಳನ್ನು ತನಗೆ ಬೆದರಿಕೆ ಹಾಕಿ ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿದ ಬಳಿಕ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರಾಗಿ ಹೇಳಿಕೆ ನೀಡುವ ಮೂಲಕ ಆರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದ ಮಂಡ್ಯ ಮೂಲದ ಚಿನ್ನಯ್ಯನ ಸಮ್ಮುಖದಲ್ಲಿ ಎಸ್.ಐ.ಟಿ. ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ೧೭ ಸ್ಥಳಗಳಲ್ಲಿ ಉತ್ಖನನ ನಡೆಸಿದ್ದರು.
ಸಾಕ್ಷಿದಾರರ ಭದ್ರತಾ ಕಾಯ್ದೆಯಡಿ ರಕ್ಷಣೆ ಪಡೆದು ಮುಸುಕುಧಾರಿಯಾಗಿ ಆಗಮಿಸಿ ಎಲ್ಲಿಯೂ ಗುರುತು ಪರಿಚಯ ಬಹಿರಂಗ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತಾದರೂ ಸಾಕ್ಷಿ ದೂರುದಾರನಾಗಿದ್ದ ಈತ ಈ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಆತನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಅಟ್ಟಲಾಗಿತ್ತು. ನಂತರ ಆತ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗಿತ್ತು. ಚಿನ್ನಯ್ಯ ಸಾಕ್ಷಿ ದೂರುದಾರ ಆಗಿದ್ದ ವೇಳೆ ಆತನೊಂದಿಗೆ ಇರುತ್ತಿದ್ದ ವಕೀಲರು ಆತ ಆರೋಪಿಯಾದ ಬಳಿಕ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ಸರಕಾರದ ವತಿಯಿಂದ ಪ್ಯಾನಲ್ ವಕೀಲರನ್ನು ನೇಮಿಸಲಾಗಿದ್ದು ಜಾಮೀನು ಅರ್ಜಿಯ ವಿಚಾರಣೆ ವೇಳೆ ಚಿನ್ನಯ್ಯನ ಪರ ಡಿಫೆನ್ಸ್ ಕೌನ್ಸಿಲ್‌ನ ಮೂವರು ವಕೀಲರು ವಾದಿಸಿದ್ದರೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿರುವ ಪುತ್ತೂರು ಮೂಲದ ದಿವ್ಯರಾಜ್ ಹೆಗ್ಡೆ ಉಲಾಂಡಿ ಅವರು ಎಸ್‌ಐಟಿ ಪರ ವಾದಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಚಿನ್ನಯ್ಯನ ಜಾಮೀನು ಅರ್ಜಿ ವಜಾ ಮಾಡಿದ್ದರು. ಇದೀಗ ಚಿನ್ನಯ್ಯನ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ.
ಚಿನ್ನಯ್ಯನ ವಿರುದ್ಧದ ಗಂಭೀರ ಆರೋಪಗಳು: ಈ ಹಿಂದೆ ಧರ್ಮಸ್ಥಳ ದೇವಳದ ಸ್ವಚ್ಛತಾ ವಿಭಾಗದ ಕಾರ್ಮಿಕನಾಗಿ, ಆ ಬಳಿಕ ಉಜಿರೆ ಗ್ರಾ.ಪಂ. ಶೌಚಾಲಯದ ಸಿಬ್ಬಂದಿಯಾಗಿ, ನಂತರ ತಮಿಳುನಾಡು ಸೇರಿದಂತೆ ವಿವಿಧೆಡೆ ಕೂಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿದ್ದ ಮಂಡ್ಯ ಮೂಲದ ಚಿನ್ನಯ್ಯ ಇತ್ತೀಚೆಗೆ ದಿಢೀರ್ ಪ್ರತ್ಯಕ್ಷಗೊಂಡಿದ್ದ.
ಧರ್ಮಸ್ಥಳ ಮತ್ತು ಆಸುಪಾಸಿನ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಮೃತದೇಹಗಳನ್ನು ತನಗೆ ಬೆದರಿಕೆ ಹಾಕಿ ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ಆತ ಹೇಳಿದ್ದ. ತಾನು ಹೂತು ಹಾಕಿರುವುದಾಗಿ ಹೇಳಿಕೊಂಡಿದ್ದ ಮೃತದೇಹವೊಂದರ ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದ.
ನಂತರ ರಾಜ್ಯ ಸರಕಾರದಿಂದ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ವಿಚಾರಣೆಯ ವೇಳೆ ಈತ ಆ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ. ಬೇರೆಯವರು ಕೊಟ್ಟದ್ದು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಅ.೨೩ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೨೨೧ (ಪೊಲೀಸರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಮಾಹಿತಿ ನೀಡುವುದರಿಂದ ನುಣುಚಿಕೊಳ್ಳುವುದು), ಸೆಕ್ಷನ್ ೨೨೭ (ಸುಳ್ಳು ಸಾಕ್ಷ್ಯ ಒದಗಿಸಿರುವುದು), ಸೆಕ್ಷನ್ ೨೨೮ ಮತ್ತು ೨೨೯ (ಸುಳ್ಳು ಸಾಕ್ಷ್ಯ ಸೃಷ್ಟಿಸಿರುವುದು), ಸೆಕ್ಷನ್ ೨೩೦ (ಮರಣದಂಡನೆಗೆ ಅರ್ಹವಾದ ಅಪರಾಧಕ್ಕೆ ಸುಳ್ಳು ಸಾಕ್ಷ್ಯ ಸೃಷ್ಟಿ), ಸೆಕ್ಷನ್ ೨೩೧ (ಜೀವಾವಧಿ ಶಿಕ್ಷೆ ಕೊಡುವಂತಹ ಅಪರಾಧಕ್ಕೆ ಸಂಬಂಧಿಸಿ ಸುಳ್ಳು ಸಾಕ್ಷ್ಯ ಸೃಷ್ಟಿ), ೨೩೬ (ಸುಳ್ಳು ಘೋಷಣೆ), ಸೆಕ್ಷನ್ ೨೪೮ (ಸುಳ್ಳು ಆರೋಪ) ಮತ್ತು ಸೆಕ್ಷನ್ ೩೩೬ (ನಕಲಿ ದಾಖಲೆ ಸೃಷ್ಟಿ) ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಇಂತಹ ಗಂಭೀರ ಆರೋಪ ಈತನ ವಿರುದ್ಧ ದಾಖಲಾಗಿರುವುದರಿಂದ ಆತನಿಗೆ ಜಾಮೀನು ನಿರಾಕರಣೆಯಾಗಿದೆ.