

ಮುಂಡಾಜೆ: ಗ್ರಾಮದ ಕೊಟ್ರೂಟ್ಟು ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಏ. 2ರಂದು ಪೂರ್ವಾಹ್ನ ನಡೆಯಿತು. ಘಟನೆಯಿಂದ ಸುಮಾರು ಒಂದೂವರೆ ಎಕರೆಯಷ್ಟು ಸ್ಥಳ ಸುಟ್ಟು ಕರಕಲಾಗಿದೆ. ಸ್ಥಳೀಯ ಪರಿಸರದಲ್ಲಿ ಹೆಚ್ಚಿನ ಮನೆಗಳು ಇದ್ದು ಜನರಲ್ಲಿ ಆತಂಕ ಉಂಟಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ ಬಂಗೇರ ಸಹಿತ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ಮನೆಗಳತ್ತ ಹರಡದಂತೆ ಮುನ್ನೆಚ್ಚರಿಕೆ ವಹಿಸಿದರು.
ನೀರಿನ ಟ್ಯಾಂಕರ್ ಗೆ ಪರದಾಟ: ಬೆಳ್ತಂಗಡಿ ತಾಲೂಕಿನಲ್ಲಿ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದ ಕಾರಣ ಬೆಂಕಿಯನ್ನು ನಂದಿಸಲು ನೀರಿನ ಟ್ಯಾಂಕರ್ ಹುಡುಕುವುದೇ ಸಮಸ್ಯೆಯಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಮುಗ್ರೋಡಿ ಕನ್ಸ್ ಸ್ಟ್ರಂಕ್ಷನ್ಸ್ ಉದಯ್ ರವರ ನೀರಿನ ಟ್ಯಾಂಕರ್ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದು, ಮಧ್ಯಾಹ್ನದ ಬಳಿಕ ಸುರಿದ ಉತ್ತಮ ಮಳೆಯಿಂದ ಬೆಂಕಿ ಸಂಪೂರ್ಣ ನಂದಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.